ಎಸ್‍ಓಪಿ ನಿಯಮ ಪಾಲಿಸಿ-ಪಾಠಪ್ರವಚನ ನಡೆಸಿ:ಶಾಹಾಬಾದಕರ್

ಬೀದರ್:ಡಿ.26:ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೋವಿಡ್ -19ರ ಹಿನ್ನಲೆಯಲ್ಲಿ ಸರ್ಕಾರ ಮತ್ತು ಇಲಾಖೆ ನಿರ್ದೇಶಿಸಿದ ಎಸ್‍ಓಪಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಪಿಯು ವರ್ಗಗಳನ್ನು ನಡೆಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್ ತಾಕೀತು ಮಾಡಿದರು.
ಇಲ್ಲಿನ ಜ್ಞಾನಸುಧಾ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ 2021 ಜ.01ರಿಂದ ಪಿಯು ದ್ವಿತೀಯ ವರ್ಗಗಳನ್ನು ಆರಂಭಿಸುವ ಕುರಿತು ಕರೆದ ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,ಸರ್ಕಾರ ಜನೇವರಿ 01ರಿಂದ ಪಿಯು ತರಗತಿಗಳನ್ನು ನಡೆಸಲು ಮುಂದಾಗಿದೆ.ಕಾರಣ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವ ಮುನ್ನ ವಿದ್ಯಾರ್ಥಿಗಳು ಸಾಮಾನ್ಯವಾಗಿ ಬಳಸುವ ಬೋಧನಾ ಕೋಠಡಿ ,ಪ್ರಯೋಗಾಲಯಗಳನ್ನು ಸ್ಯಾನಿಟೈಸ್ ಮಾಡಬೇಕು.ಒಂದು ಕೋಣೆಯಲ್ಲಿ 15 ವಿದ್ಯಾರ್ಥಿಗಳ ಆಸನ ವ್ಯವಸ್ಥೆ ಮಾಡುವ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.ದಿನಕ್ಕೆ 45 ನಿಮಿಷದ ನಾಲ್ಕು ತರಗತಿಗಳನ್ನು ನಡೆಸಬೇಕು.ಶೀತ,ಜ್ವರ,ನೆಗಡಿಯಿಂದ ಬಳಲುವವರಿಗೆ ಐಸೋಲೆಶನ್ ವರ್ಗಕ್ಕೆ ಅವಕಾಶ ಮಾಡಬೇಕು.ಸೋಪು ಅಥವಾ ಹ್ಯಾಂಡ್‍ವಾಷ್‍ನಿಂದ ಕೈ ತೊಳೆಯುವ ವ್ಯವಸ್ಥೆ ಮಾಡಬೇಕು.ಪ್ರತಿದಿನ ಶೌಚಾಲಯ ಶುಚಿಗೊಳಿಸಬೇಕು.ಉಪನ್ಯಾಸಕರು ಸಹ ಮಾಸ್ಕ್‍ದೊಂದಿಗೆ ಫೇಸ್‍ಶಿಲ್ಡ್ ಬಳಸಬೇಕು.ಶಾಲಾ ವಾಹನಗಳಲ್ಲಿ ಎಸ್‍ಓಪಿ ನಿಯಮ ಅನುಸರಿಸಬೇಕು.ಪಾಲಕರಿಂದ ಮಕ್ಕಳ ಕೋವಿಡ್ ಬಗ್ಗೆ ದೃಢೀಕರಣ ಪತ್ರ ತೆಗೆದುಕೊಳ್ಳಬೇಕು.ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸಲು ತಿಳಿಸಬೇಕು.ಆಯಾ ಕಾಲೇಜಿನವರು ಪ್ರತಿದಿನ ಮಕ್ಕಳ ಹಾಜರಾತಿಯನ್ನು ಪೋರ್ಟಲ್‍ನಲ್ಲಿ ಅಪಡೇಟ್ ಮಾಡಬೇಕು.ಮಕ್ಕಳ ಹಾಜರಾತಿ ಕಡ್ಡಾಯವಿಲ್ಲ.ಪ್ರಾರ್ಥನೆಗೆ ಅವಕಾಶವಿಲ್ಲ.ವಿಜ್ಞಾನ ವಿಭಾಗದವರು ಪ್ರಯೋಗ ವರ್ಗಗಳನ್ನು ನಡೆಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಪ್ರಧಾನ ಕಾರ್ಯದರ್ಶಿ ವಿಠಲದಾಸ ಪ್ಯಾಗೆ,ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಓಂಕಾರ ಸೂರ್ಯವಂಶಿ ಕೋವಿಡ್ ಉನ್ನತಿಕರಿಸಿದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕ್ರಿಸ್ಮಸ್ ಕೇಕ್:ಇದೇ ವೇಳೆ ಎನ್.ಎಫ್.ಎಚ್.ಎಸ್.ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ಅವರು ಆಯೋಜಿಸಿದ ಕ್ರಿಸ್‍ಮಸ್ ಹಬ್ಬದ ಕೇಕ್ ಡಿಡಿಪಿಯು ಚಂದ್ರಕಾಂತ ಶಾಹಾಬಾದಕರ್ ಕತ್ತರಿಸಿ ಎಲ್ಲರಿಗೂ ಸಿಹಿ ಹಂಚಿದರು.
ಪ್ರಾಚಾರ್ಯ ಚನ್ನವೀರ ಪಾಟೀಲ್ ನಿರೂಪಿಸಿದರು.ಪ್ರಾಚಾರ್ಯ ಸಂಘದ ಭಾಲ್ಕಿ ಪ್ರತಿನಿಧಿ ಅಶೋಕ ರಾಜೋಳೆ ವಂದಿಸಿದರು.