ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆ ಎದುರಿಸಿ: ಗೋವಿಂದಪ್ಪ

ಚಿತ್ರದುರ್ಗ,ಏ.8; ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಯಾವುದೇ ಅಂಜಿಕೆ, ಭಯವಿಲ್ಲದೇ ಧೈರ್ಯವಾಗಿ ಪರೀಕ್ಷೆ ಎದುರಿಸಬೇಕು ಎಂದು ವಿಜ್ಞಾನ ವಿಷಯ ಪರಿವೀಕ್ಷಕ ಗೋವಿಂದಪ್ಪ ಹೇಳಿದರು.
 ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲೆಯ ಉರ್ದು ಪ್ರೌಢಶಾಲೆಗಳ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ ಹಾಗೂ ಉರ್ದು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ವಿಷಯವಾರು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 2021ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಶೇ.70 ರಷ್ಟು ಪಠ್ಯ ಮಾತ್ರ ಅಭ್ಯಾಸ ಮಾಡಬೇಕಾಗಿದೆ. ಶೇ.30 ರಷ್ಟು ಪಠ್ಯವನ್ನು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿ ಅವರು ಕಡಿತಗೊಳಿಸಿದ್ದಾರೆ. ಮುಂಬರುವ ಎಸ್‍ಎಸ್‍ಎಲ್‍ಸಿ ಪ್ರಶ್ನೆ ಪತ್ರಿಕೆ ಅತ್ಯಂತ ಸರಳವಾಗಿರುತ್ತದೆ ಎಂದರು.
 ಪ್ರಶ್ನೆ ಪತ್ರಿಕೆಯ ವಿನ್ಯಾಸ, ಪ್ರಶ್ನೆ ಪ್ರತಿಕೆ ಭಾಗಗಳ ಮತ್ತು ಅವುಗಳಿಗೆ ನೀಡಿರುವ ಅಂಕಗಳ ಬಗ್ಗೆ ವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿಜ್ಞಾನದಲ್ಲಿ ಚಿತ್ರಗಳ ಬಿಡಿಸುವಿಕೆಗೆ 16 ಅಂಕಗಳು ಮೀಸಲಿದ್ದು, ವಿದ್ಯಾರ್ಥಿಗಳು ಚಿತ್ರಗಳನ್ನು ಬಿಡಿಸುವ ಮೂಲಕ ಪೂರ್ಣ ಅಂಕಗಳನ್ನು ತೆಗೆದುಕೊಂಡು ಉತ್ತಿರ್ಣರಾಗಲು ಕಷ್ಟವಾಗುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
 ಗಣಿತ ವಿಷಯ ಪರಿವೀಕ್ಷಕಿ ಸವಿತಾ ಮಾತನಾಡಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭಕ್ಕೆ ಕೇವಲ 75 ದಿನಗಳು ಮಾತ್ರ ಬಾಕಿ ಇದೆ. ಹಾಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸ ಮಾಡುವುದರ ಮೂಲಕ ಉತ್ತಮ ಪರೀಕ್ಷಾ ಫಲಿತಾಂಶ ಪಡೆಯಬಹುದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶುಯೇಬ್ ಬೇಗ್, ನಿಖತ ಫಾತಿಮ, ಜಕಾವುಲ್ಲಾ,
ಉರ್ದು ಶಿಕ್ಷಣ ಸಂಯೋಜಕಿ ಸಯದ್ ಸಮೀರಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.