ಎಸ್‌ಸಿಡಿಸಿಸಿ ಬ್ಯಾಂಕ್ ಕಾರ್ಯವೈಖರಿಗೆ ಸಹಕಾರ ಸಚಿವರ ಮೆಚ್ಚುಗೆ:

ಮಂಗಳೂರು, ಎ.೯- ಕರ್ನಾಟಕ ರಾಜ್ಯ ಸರಕಾರದ ಸಹಕಾರ ಸಚಿವರಾದ ಶ್ರೀ ಎಸ್.ಟಿ ಸೋಮಶೇಖರ್ ಅವರು ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಪ್ರಗತಿ ಪರಿಶೀಲನೆ ಹಾಗೂ ಸಹಕಾರ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ|ಎಂ.ಎನ್ ರಾಜೇಂದ್ರ ಕುಮಾರ್ ಅವರು ಸ್ವಾಗತಿಸಿ, ಸಚಿವರನ್ನು ಸನ್ಮಾನಿಸಿದರು. ಬ್ಯಾಂಕ್ ಕೃಷಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಅಲ್ಪಾವಧಿ ಕೃಷಿ ಸಾಲವನ್ನು ನೀಡಿದೆ. ವರದಿ ವರ್ಷದಲ್ಲಿ ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ ರೂ.೧೫೯೬.೦೪ ಕೋಟಿ ಹಾಗೂ ಮಧ್ಯಮಾವಧಿ ಸಾಲ ರೂ.೧೨೯.೩೪ ಕೋಟಿ ಸಾಲ ನೀಡಿದ್ದು, ಹೀಗೆ ಒಟ್ಟು ಕೃಷಿ ಕ್ಷೇತ್ರಕ್ಕೆ ರೂ.೧೭೨೫.೩೮ ಕೋಟಿ ರೂ. ಸಾಲ ನೀಡಿದೆ. ಮಾತ್ರವಲ್ಲ ಕೇಂದ್ರ ಸರಕಾರದ ಆತ್ಮನಿರ್ಭರ ಯೋಜನೆಯಡಿಯಲ್ಲಿ ಹೈನುಗಾರಿಕೆ, ಮೀನುಗಾರಿಕೆ ಉದ್ದೇಶಗಳಿಗೆ ಸಾಲ ನೀಡಿದ್ದು, ಒಟ್ಟು ೭೪೧೮ ಫಲಾನುಭವಿಗಳಿಗೆ ಬ್ಯಾಂಕ್ ರೂ.೧೬.೮೯ ಕೋಟಿ ಸಾಲ ನೀಡಿದೆ ಎಂದು ಡಾ|ಎಂ.ಎನ್ ರಾಜೇಂದ್ರ ಕುಮಾರ್‌ರವರು ಸಚಿವರಿಗೆ ವಿವರಿಸಿದರು.
ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಪ್ರವೀಣ್ ಬಿ. ನಾಯಕ್ ಅವರು ಸಹಕಾರಿ ಇಲಾಖೆಯ ಪ್ರಗತಿಯನ್ನು ಸಚಿವರಿಗೆ ವಿವರಿಸಿದರು.
ಮೆಚ್ಚುಗೆ: ಸಚಿವರು ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಗತಿ ಹಾಗೂ ಬ್ಯಾಂಕಿನ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದರು. ಸಹಕಾರ ಇಲಾಖೆಯ ವರದಿಯನ್ನು ಪರಿಶೀಲಿಸಿದರು. ಸರಕಾರ ೨೦೨೦-೨೧ನೇ ಸಾಲಿನಲ್ಲಿ ನಿಗದಿಪಡಿಸಿದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಾಲ ನೀಡಿಕೆಯ ಗುರಿಯನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ಸಾಧಿಸಿರುವುದನ್ನು ಪ್ರಶಂಶಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಬೆಳಪು, ಶ್ರೀ ಶಶಿ ಕುಮಾರ್ ರೈ ಬಾಲ್ಯೊಟ್ಟು, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರವೀಂದ್ರ ಬಿ, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪನಾ ನಿರ್ದೇಶಕರಾದ ಡಾ| ಎಸ್.ಟಿ ಸುರೇಶ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀ ಸುಧೀರ್ ಕುಮಾರ್, ಬ್ಯಾಂಕಿನ ಮಹಾಪ್ರಬಂಧಕರಾದ ಶ್ರೀ ಗೋಪಿನಾಥ್ ಭಟ್ ಹಾಗೂ ಬ್ಯಾಂಕಿನ ಅಧಿಕಾರಿಗಳು ಹಾಗೂ ಸಹಕಾರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.