ಎಸ್‌ಡಿಪಿಐ ಕಚೇರಿಗೆ ಬೆಂಕಿ

ಮೇಗಿನಪೇಟೆಯಲ್ಲಿ ನಡೆದ ಘಟನೆ: ಮುಂಜಾನೆ ಪ್ರಕರಣ ಬೆಳಕಿಗೆ
ಬಂಟ್ವಾಳ, ಜ.೪- ವಿಟ್ಲ ವಲಯ ಎಸ್.ಡಿ.ಪಿ.ಐ. ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಘಟನೆ ವಿಟ್ಲದ ಮೇಗಿನಪೇಟೆಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.
ಕಚೇರಿಯ ಮುಂಭಾಗದ ಬಾಗಿಲಿನ ಭಾಗಕ್ಕೆ ಬೆಂಕಿ ಹಚ್ಚಿದ್ದು ಸ್ಥಳದಲ್ಲಿ ಪೈಂಟ್ ಡಬ್ಬಗಳು ಪತ್ತೆಯಾಗಿವೆ. ಪೈಂಟ್ ಹಚ್ಚಿ ಬೆಂಕಿ ಹಾಕಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಇದರಿಂದ ಕಚೇರಿಯ ಮುಂಭಾಗ ಹಾನಿಗೊಂಡಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್.ಡಿ.ಪಿ.ಐ. ಮುಖಂಡ ಕಲಂದರ್ ಪರ್ತಿಪ್ಪಾಡಿ ಹಾಗೂ ಶಾಕೀರ್ ಅಳಕೆಮಜಲು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್.ಡಿ.ಪಿ.ಐ. ಬೆಂಬಲಿತರು ಅಭೂತಪೂರ್ವ ಗೆಲವು ಸಾಧಿಸಿದ್ದರು. ಇದಾದ ಬಳಿಕ ಪಕ್ಷದ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ಪಕ್ಷವನ್ನು ಕುಗ್ಗಿಸುವ ಕಾರ್ಯ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಈ ಘಟನೆ ನಡೆದಿದೆ. ತಕ್ಷಣವೇ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.