ಎಸ್‌ಡಿಪಿಐ ಕಚೇರಿಗೆ ಬೆಂಕಿ: ಆರೋಪಿಗಳ ಬಂಧನಕ್ಕೆ ಆಗ್ರಹ


ಬಂಟ್ವಾಳ, ಜ.೫- ವಿಟ್ಲ ಎಸ್.ಡಿ.ಪಿ.ಐ. ಕಚೇರಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ವಿಟ್ಲ ವಲಯ ಎಸ್.ಡಿ.ಪಿ.ಐ. ವತಿಯಿಂದ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸಂಘಪರಿವಾರ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು, ಕೃತ್ಯ ಎಸಗಿದವರನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದರು. ಪ್ರತಿಭಟನಾ ಸ್ಥಳದಿಂದ ವಿಟ್ಲ ಪೊಲೀಸ್ ಠಾಣೆಗೆ ಪ್ರತಿಭಟನಕಾರರು ಮೆರವಣಿಗೆ ನಡೆಸಲು ಮುಂದಾಗುತ್ತಿದ್ದಂತೆ ಸ್ಥಳಕ್ಕೆ ಬಂದ ವಿಟ್ಲ ಪೊಲೀಸರು ಪ್ರತಿಭಟನೆ ಹಿಂತೆಗೆಯುವಂತೆ ಮನವಿ ಮಾಡಿದರು. ಎಸೈ ರಾಜೇಶ್ ಕೆ.ವಿ. ಅವರು ಪ್ರತಿಭಟನಕಾರರ ಜತೆ ಮಾತುಕತೆ ನಡೆಸಿ ತಕ್ಷಣವೇ ದುಷ್ಕರ್ಮಿಗಳನ್ನು ಬಂಧಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು. ೨೪ ಗಂಟೆಯೊಳಗಡೆ ದುಷ್ಕರ್ಮಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದ್ದಾರೆ. ಬಳಿಕ ಮಾತನಾಡಿದ ಎಸ್.ಡಿ.ಪಿ.ಐ. ಮುಖಂಡ ಖಲಂದರ್ ಪರ್ತಿಪ್ಪಾಡಿ, ರಾಜ್ಯ ಹಾಗೂ ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಯನ್ನು ಸಹಿಸಲಾಗದ ತಂಡದಿಂದ ಈ ಕೃತ್ಯ ನಡೆದಿದೆ. ಇದರ ಹಿಂದೆ ಸಂಘಪರಿವಾರ ಮತ್ತು ಬಿಜೆಪಿ ವಿವಿಧ ಷಡ್ಯಂತ್ರ ಮಾಡುತ್ತಿದೆ. ಇದರ ಮುಂದುವರಿದ ಭಾಗವಾಗಿ ಈ ಕೃತ್ಯ ಎಸೆಗಿದ್ದಾರೆ ಎಂದು ದೂರಿದರು. ಶಾಕೀರ್ ಅಳಕೆಮಜಲು ಮಾತನಾಡಿ, ಈ ಕೃತ್ಯದ ಹಿಂದೆ ಸಂಘಪರಿವಾರ ಮತ್ತು ಬಿಜೆಪಿ ಇರುವುದು ಖಚಿತವಿದೆ. ಪಕ್ಷವನ್ನು ದಮನಿಸಲು ಬೆಂಕಿ ಅಥವಾ ಬೇರೇನು ನಡೆಸಿದರೂ ಎಸ್.ಡಿ.ಪಿ.ಐ. ಜಗ್ಗುವುದಿಲ್ಲ. ಬಿಜೆಪಿಯ ಕೆಲವು ನಾಯಕರ ಪ್ರಚೋದಕಾರಿ ಹೇಳಿಕೆಗಳಿಂದ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದರು. ಪುತ್ತೂರು ನಗರ ಸಮಿತಿ ಅಧ್ಯಕ್ಷ ಬಶೀರ್ ಕೂರ್ನಡ್ಕ, ಅಝೀಝ್ ಕಡಂಬು ರಹೀಂ ವಿಟ್ಲ, ರಫೀಕ್ ಪೊನ್ನೋಟ್ಟು ಮೊದಲಾದವರು ಭಾಗವಹಿಸಿದ್ದರು.