ಎಸ್‌ಜೆ ಪಾರ್ಕ್ ಪಿಎಸ್ಸೈ ಯೊಗೇಶ್ ಸಸ್ಪೆಂಡ್

ಬೆಂಗಳೂರು,ಸೆ.೧೩-ಕೃಷಿಕರೊಬ್ಬರು ಅಡಕೆ ಮಾರಾಟ ಮಾಡಿದ್ದ ೨೬.೫ ಲಕ್ಷ ರೂ.ಗಳನ್ನು ದರೋಡೆ ಮಾಡಿದ ಪ್ರಕರಣದ ಸಂಬಂಧ ಎಸ್.ಜೆ ಪಾರ್ಕ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಯೊಗೇಶ್ ಕುಮಾರ್‌ರನ್ನು ಅಮಾನತು ಮಾಡಿ ಪೊಲೀಸ್ ಆಯುಕ್ತ ಕಮಲ್‌ಪಂತ್ ಆದೇಶ ಹೊರಡಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಸಬ್‌ಇನ್ಸ್‌ಪೆಕ್ಟರ್ ಯೊಗೇಶ್ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ದರೋಡೆ ಮಾಡಿದ ಹಣದಲ್ಲಿ ಸಬ್‌ಇನ್ಸ್‌ಪೆಕ್ಟರ್ ಜೀವನ್ ಕುಮಾರ್, ಯೋಗೇಶ್ ಅವರಿಗೆ ೬ ಲಕ್ಷ ರೂ. ನೀಡಿದ್ದರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಣ ನೀಡಿರುವುದು ಬಯಲಿಗೆ ಬಂದಿತ್ತು.
ಸಿಟಿ ಮಾರುಕಟ್ಟೆ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಬ್‌ಇನ್ಸ್‌ಪೆಕ್ಟರ್ ಜೀವನ್ ಕುಮಾರ್ ವಿಚಾರಣೆ ನಡೆದಿತ್ತು. ಈ ವೇಳೆ ಹಣ ನೀಡಿರುವುದಾಗಿ ಜೀವನ್ ಬಾಯ್ಬಿಟ್ಟಿದ್ದರು.
ಹೀಗಾಗಿ ದರೋಡೆಗೆ ಸಹಕರಿಸಿದ ಆರೋಪದ ಮೇಲೆ ಯೋಗೇಶ್ ಅವರನ್ನು ಪೊಲೀಸ್ ಆಯುಕ್ತ ಕಮಲ್ ಪಂತ್ ಅಮಾನತು ಮಾಡಿದ್ದಾರೆ.