ಎಸ್‌ಐಟಿ ಮುಂದೆ ಹಾಜರಾಗಲಿ ಯುವತಿಗೆ ಸಿದ್ದು ಸಲಹೆ

ಬೆಂಗಳೂರು, ಮಾ. ೨೬- ರಮೇಶ್ ಜಾರಕಿಹೊಳಿ ಸಿಡಿಗೆ ಸಂಬಂಧಿಸಿದಂತೆ, ಸಂತ್ರಸ್ತೆ ಎನ್ನಲಾದ ಯುವತಿ ವಿಶೇಷ ತನಿಖಾ ದಳದ ಮುಂದೆ ಹಾಜರಾಗಿ ತನ್ನ ಹೇಳಿಕೆ ದಾಖಲಿಸಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ, ಯುವತಿ ಪದೇಪದೇ ಸಿಡಿ ಬಿಡುಗಡೆ ಮಾಡುವುದು, ಹೇಳಿಕೆ ನೀಡುವುದು, ಎಲ್ಲವನ್ನೂ ಬಿಟ್ಟು ನೇರವಾಗಿ ಎಸ್‌ಐಡಿ ಮುಂದೆ ಹಾಜರಾಗಿ ಹೇಳಿಕೆ ನೀಡಲಿ ಎಂದು ಸಿದ್ದರಾಮಯ್ಯ, ಯುವತಿಗೆ ಸಲಹೆ ನೀಡಿದ್ದಾರೆ.
ಸಂತ್ರಸ್ತೆ ಎನ್ನಲಾದ ಯುವತಿ ಈ ಹಿಂದೆ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ತಂದೆ – ತಾಯಿಗೆ ರಕ್ಷಣೆ ನೀಡುವಂತೆ, ಮಾಡಿದ್ದ ಮನವಿಯನ್ವಯ ರಕ್ಷಣೆ ಒದಗಿಸಲು ಗೃಹ ಸಚಿವರಿಗೆ ಒತ್ತಾಯಿಸಿದ್ದೇನೆ ಎಂದು ಇಂದು ತಮ್ಮ ನಿವಾಸದಲ್ಲಿ ಭೇಟಿಯಾದ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಯಾರೇ ರಕ್ಷಣೆ ಕೇಳಿದರೂ ಒದಗಿಸುವುದು ಸರ್ಕಾರದ ಕರ್ತವ್ಯ. ಅದೇ ರೀತಿ ರಕ್ಷಣೆ ಕೇಳಿರುವ ಯುವತಿಗೂ ಸಹ ಸರ್ಕಾರ ರಕ್ಷಣೆ ಒದಗಿಸಬೇಕು. ಈ ಸಂಬಂಧ ಪೊಲೀಸ್ ಮಹಾನಿರ್ದೇಶಕರೊಂದಿಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ರಮೇಶ್ ಜಾರಕಿಹೊಳಿ ಅವರ ಕುರಿತಂತೆ, ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ವಕೀಲನೂ ಹೌದು, ವಿರೋಧ ಪಕ್ಷದ ನಾಯಕನೂ ಹೌದು, ಸತ್ಯ ಹೇಳುವುದರಿಂದ ಗೌರವ ಕಡಿಮೆಯಾಗುತ್ತದೆ ಎನ್ನುವುದಾದರೆ, ಮಾಡುವುದಾದರೂ ಏನು? ಎಂದು ಪ್ರಶ್ನಿಸಿದರು.
ಪ್ರಬಲ ಸಾಕ್ಷಿ ಇರುವ ಕುರಿತಂತೆ, ರಮೇಶ್ ಜಾರಕಿಹೊಳಿ ಅವರು, ನೀಡಿರುವ ಹೇಳಿಕೆ ಕುರಿತಂತೆ ಮಾತನಾಡಿದ ಸಿದ್ದರಾಮಯ್ಯ ಅವರು, ಘಟನೆಗೆ ಸಂಬಂಧಿಸಿದಂತೆ, ಹಿಂದಿರುವ ಮಹಾನಾಯಕರು ಯಾರು?ಎನ್ನುವುದು ನನಗೆ ಗೊತ್ತಿಲ್ಲ. ಒಂದು ವೇಳೆ ಇದ್ದಿದ್ದರೆ, ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಬಹುದಾಗಿತ್ತು ಎಂದರು.