ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ಫೋನ್‌ಇನ್ ಕಾರ್ಯಕ್ರಮ

ಕೋಲಾರ, ಮಾ.೨೪: ಕೋವಿಡ್ ೨ನೇ ಅಲೆಯ ಭೀತಿಯ ನಡುವೆ ಎಸ್ಸೆಸ್ಸೆಲ್ಸಿ ಮಕ್ಕಳ ಗೊಂದಲ ನಿವಾರಣೆಗೆ ಶಿಕ್ಷಣ ಇಲಾಖೆ ನಡೆಸಿದ ಈ ಸಾಲಿನ ಮೊದಲ ಫೋನ್‌ಇನ್ ಕಾರ್ಯಕ್ರಮದಲ್ಲಿ ೩೬೫ ಪ್ರಶ್ನೆಗಳನ್ನು ಮಕ್ಕಳು ಕೇಳಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಸಮರ್ಪಕ ಉತ್ತರ ನೀಡಲಾಗಿದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜೂನ್ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿರುವ ಮಕ್ಕಳಲ್ಲಿನ ಗೊಂದಲ ನಿವಾರಣೆಗಾಗಿ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆಸಿದ ಮೊದಲ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.ಪ್ರಶ್ನೆ ಕೇಳಿದ ಯಾವ ವಿದ್ಯಾರ್ಥಿಯಲ್ಲೂ ಕೋವಿಡ್ ಮತ್ತು ಪರೀಕ್ಷಾ ಭಯ ಕಾಣಲಿಲ್ಲ, ಪ್ರತಿಯೊಬ್ಬರೂ ಪರೀಕ್ಷಾ ಸಿದ್ದತೆ, ಪಠ್ಯ ಕಡಿತದ ಮಾಹಿತಿ, ಪರೀಕ್ಷಾ ವಿಧಾನ, ಪ್ರಶ್ನೆಪತ್ರಿಕೆ ಮಾದರಿ ಹೀಗೆ ಗೊಂದಲ ಪರಿಹಾರಕ್ಕೆ ಪ್ರಶ್ನೆ ಕೇಳಿದರೆ ಹೊರತೂ ಯಾರೂ ಕೋವಿಡ್ ಎರಡನೇ ಅಲೆಯ ಆತಂಕದ ಕುರಿತು ಚಕಾರವೂ ಎತ್ತಲಿಲ್ಲ ಎಂದರು.
ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿ ಸಮರ್ಪಕ ಪಾಲನೆಯೇ ಮಕ್ಕಳಲ್ಲಿನ ಈ ಕೋವಿಡ್ ಭಯ ನಿವಾರಣೆಗೆ ಕಾರಣವಾಗಿದೆ ಎಂದ ಅವರು, ಶಾಲೆಗಳಲ್ಲಿ ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಸೂಚಿಸಲಾಗಿದೆ ಎಂದು ತಿಳಿಸಿ, ಎಸ್ಸೆಸ್ಸೆಲ್ಸಿ ಮಕ್ಕಳ ಗೊಂದಲ ನಿವಾರಣೆಗೆ ಮುಂದಿನ ದಿನಗಳಲ್ಲೂ ಮತ್ತಷ್ಟು ಫೋನ್ ಇನ್ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಫೋನ್ ಇನ್ ಕಾರ್ಯಕ್ರಮದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳ ಕುರಿತು ಮಾಹಿತಿ ನೀಡಿ, ಪರೀಕ್ಷಾ ವಿಧಾನಕ್ಕೆ ಸಂಬಂಧಿಸಿದಂತೆ ೩೦ ಪ್ರಶ್ನೆಗಳು ಮಕ್ಕಳಿಂದ ಬಂತು ಎಂದರು.
ಉಳಿದಂತೆ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ೬೦ ಪ್ರಶ್ನೆ, ಇಂಗ್ಲೀಷ್ ವಿಷಯಕ್ಕೆ ೫೪ ಪ್ರಶ್ನೆ, ಹಿಂದಿಗೆ ೨೫, ಗಣಿತ ವಿಷಯಕ್ಕೆ ಸಂಬಂಧಿಸಿದಮತೆ ೫೪, ವಿಜ್ಞಾನ ವಿಷಯಕ್ಕೆ ೭೮ ಪ್ರಶ್ನೆ ಹಾಗೂ ಸಮಾಜವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ೬೪ ಪ್ರಶ್ನೆಗಳನ್ನು ಮಕ್ಕಳು ಕೇಳಿದರು ಎಂದು ವಿವರಿಸಿದರು.
ಮಕ್ಕಳು ಅತಿ ಹೆಚ್ಚು ಅಂಕ ಗಳಿಸಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ನಾಗೇಂದ್ರಪ್ರಸಾದ್, ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ, ಪ್ರತಿಅಧ್ಯಾಯದ ಅಭ್ಯಾಸದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿ, ಇಲಾಖೆ ನೀಡಿರುವ ಅಧ್ಯಾಯವಾರು ಪ್ರಶ್ನೆಪತ್ರಿಕೆ, ‘ನನ್ನನ್ನೊಮ್ಮೆ ಗಮನಿಸಿಪ್ರಶ್ನೋತ್ತರ ಮಾಲಿಕೆಯನ್ನು ಓದಿ, ಪ್ರಶ್ನೆಗಳಿಗೆ ನೀವೇ ಉತ್ತರ ಬರೆದು ಅಭ್ಯಾಸ ಮಾಡಿ ಎಂದು ಸಲಹೆ ನೀಡಿದರು.
ನಿರಂತರ ಪುನರ್ಮನನ ಮಾಡಿದರೆ ಎಲ್ಲಾ ಉತ್ತರಗಳು ನೆನಪಿನಲ್ಲಿರಲು ಸಾಧ್ಯ, ಎಂದ ಅವರು, ಈ ಬಾರಿ ಪ್ರಶ್ನೆ ಪತ್ರಿಕೆ ಸುಲಭವಾಗಿರಲಿದೆ, ಶೇ.೧೦ ರಷ್ಟು ಮಾತ್ರ ಕಠಿಣ ಪ್ರಶ್ನೆಗಳು ಇರುತ್ತವೆ, ಪುಸ್ತಕದಲ್ಲಿನ ಮಾಹಿತಿ ಹೊರತು ಪಡಿಸಿ ಬೇರಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ಸ್ವಷ್ಟಪಡಿಸಿದರು.
ಕನ್ನಡ,ಇಂಗ್ಲೀಷ್, ಹಿಂದಿಯಲ್ಲಿ ಮಕ್ಕಳು ವ್ಯಾಕರಣದ ಕುರಿತು ಹೆಚ್ಚು ಪ್ರಶ್ನೆ ಕೇಳಿದರೆ, ಗಣಿತದಲ್ಲಿ ೪ ಅಂಕಗಳ ಪ್ರಶ್ನೆ,ಗ್ರಾಪ್ ಲೆಕ್ಕಗಳ ಕುರಿತು ಪ್ರಶ್ನೆ ಕೇಳಿದರು.
ವಿಜ್ಞಾನದಲ್ಲಿ ಅನುವಂಶಿಕತೆ ಮತ್ತು ಮಾನವಿ ವಿಕಾಸದ ಅಧ್ಯಾಯಗಳಿಂದ ಹೆಚ್ಚಿನ ಪ್ರಶ್ನೆ ಕೇಳಿದ ಮಕ್ಕಳು, ಸಮಾಜದಲ್ಲಿ ೩-೪ ಅಂಕದ ಪ್ರಶ್ನೆಗಳ ಕುರಿತು ಮಾಹಿತಿ ಕೇಳಿದರು.
ಧೀರ್ಘ ಉತ್ತರದ ಪ್ರಶ್ನೆಗಳನ್ನು ಕೇಳಿದ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರವನ್ನು ಅವರ ಪೋಷಕರ ವಾಟ್ಸಫ್‌ಗೆ ಕಳುಹಿಸಲು ಕ್ರಮವಹಿಸಲಾಗಿದೆ ಎಂದು ನಾಗೇಂದ್ರಪ್ರಸಾದ್ ತಿಳಿಸಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಜಿಲ್ಲಾ ದೈಹಿಕ ಶಿಕ್ಷಣಧಿಕಾರಿ ಮಂಜುನಾಥ್, ವಿಷಯ ಪರಿವೀಕ್ಷಕರಾದ ಗಾಯತ್ರಿ,ಶಶಿವಧನ, ಕೃಷ್ಣಪ್ಪ, ವೆಂಕಟೇಶಪ್ಪ ಹಾಜರಿದ್ದರು.
ಮಕ್ಕಳ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳಾದ ನರಸಿಂಹಪ್ರಸಾದ್, ಮುಖ್ಯಶಿಕ್ಷಕ ಹನುಮನಹಳ್ಳಿ ನಾಗರಾಜ್, ಬಿ.ಎ.ಕವಿತಾ, ನಾರಾಯಣರೆಡ್ಡಿ, ಎನ್.ಎಸ್.ಭಾಗ್ಯ, ಶೈಲಾ, ಬಸವರಾಜ್, ರಮಾ, ವೇಣುಗೋಪಾಲ್, ಕವಿತಾ ಮತ್ತಿತರರು ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡಿ ಗೊಂದಲ ಪರಿಹರಿಸಿದರು.