ಎಸ್‌ಆರ್‌ಪಿಎಸ್ ಕಾಲೇಜು : ೩ ಕೋಣೆ – ೧೨ ಮೇಜು

ಮಸ್ಕಿ ಉಪ ಚುನಾವಣೆ : ಮೇ.೨ ಮತ ಎಣಿಕೆ – ಏಜೆಂಟರಿಗೆ ಮುಖ ಕವಚ, ಗ್ಲೌಸ್ ಕಡ್ಡಾಯ
ರಾಯಚೂರು.ಏ.೩೦- ಮಸ್ಕಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಗೆ ಎಸ್‌ಆರ್‌ಪಿಎಸ್ ಕಾಲೇಜಿನಲ್ಲಿ ಭಾರೀ ಸಿದ್ಧತೆ ಪೂರ್ಣಗೊಂಡಿದ್ದು, ಮೇ.೦೨ ರಂದು ಮುಂಜಾನೆಯಂದ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ನಗರದ ಎಸ್‌ಆರ್‌ಪಿಎಸ್ ಕಾಲೇಜಿನಲ್ಲಿ ಎಲ್ಲಾ ಮತ ಯಂತ್ರಗಳನ್ನು ಸಂಗ್ರಹಿಸಲಾಗಿದ್ದು, ಮತ ಎಣಿಕೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅವರು ಕಾಲೇಜಿಗೆ ಭೇಟಿ ನೀಡಿ, ಸಿದ್ಧತೆ ಪರಿಶೀಲಿಸಿ, ಮತ ಎಣಿಕೆಯ ಸಂಪೂರ್ಣ ವಿವರದ ಮಾಹಿತಿ ನೀಡಿದರು.
ಚುನಾವಣಾ ಆಯೋಗದ ಸೂಚನೆ ಮೇರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮತ ಎಣಿಕೆಗೆ ಬರುವ ಸಿಬ್ಬಂದಿ, ಏಜೆಂಟ ಮತ್ತು ಮಾಧ್ಯಮದವರು ಕೋವಿಡ್ ತಪಾಸಣೆ ನಿರ್ವಹಿಸಲಾಗಿದೆ. ನೆಗೆಟಿವ್ ಪ್ರಮಾಣ ಪತ್ರ ಇದ್ದವರಿಗೆ ಮಾತ್ರ ಮತ ಎಣಿಕೆ ಕೇಂದ್ರದಲ್ಲಿ ಬಿಡಲಾಗುತ್ತದೆ.
ಈ ಹಿಂದೆ ಒಟ್ಟು ೧೪ ಟೇಬಲ್‌ಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಿರ್ವಹಿಸಲಾಗುತ್ತಿತ್ತು. ಆದರೆ, ಈಗ ಒಂದೇ ವಿಧಾನಸಭಾ ಕ್ಷೇತ್ರಕ್ಕೆ ಮೂರು ಕೋಣೆಗಳನ್ನು ಮಾಡಲಾಗಿದೆ. ಒಂದು ಕೋಣೆಯಲ್ಲಿ ನಾಲ್ಕು ಮೇಜುಗಳಂತೆ ಮೂರು ಕೋಣೆಗಳಲ್ಲಿ ಒಟ್ಟು ೧೨ ಮೇಜುಗಳನ್ನು ವ್ಯವಸ್ಥೆಗೊಳಿಸಿ ಮತ ಎಣಿಕೆ ನಡೆಸಲಾಗುತ್ತದೆ. ಒಟ್ಟು ೨೬ ಸುತ್ತುಗಳಲ್ಲಿ ಈ ಮತ ಎಣಿಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಮತ ಎಣಿಕೆ ಸೂಪರ್‌ವೈಸರ್ ಮತ್ತು ಒಬ್ಬ ಸಹಾಯಕ ಹಾಗೂ ಓರ್ವ ಮೈಕ್ರೋ ವೀಕ್ಷಕರು ಸೇರಿ ಒಟ್ಟು ಒಂದು ಮೇಜಿಗೆ ಮೂವರು ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಲಾಗುತ್ತದೆ.
ಒಂದು ಟೇಬಲ್‌ಗೆ ಒಬ್ಬರಂತೆ ಒಟ್ಟು ೮ ಅಭ್ಯರ್ಥಿಗಳ ತಲಾ ಒಬ್ಬ ಏಜೆಂಟರನ್ನು ಒಳಗೆ ಬಿಡಲಾಗುತ್ತದೆ. ಏಜೆಂಟರ ಮಧ್ಯೆ ಅಂತರ ಕಾಯ್ದುಕೊಳ್ಳಲು ಇಬ್ಬರು ಏಜೆಂಟರ ಮಧ್ಯೆ ಪೂರ್ವ ಮತ್ತೊಬ್ಬ ಏಜೆಂಟ ಪಿಪಿಇ ಕಿಟ್ ಧರಿಸಿ, ಕೂಡುವಂತೆ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆಗೆ ಬರುವ ಏಜೆಂಟರು ಮುಖ ಕವಚ, ಮಾಸ್ಕ್ ಹಾಗೂ ಕೈಗಳಿಗೆ ಕಡ್ಡಾಯವಾಗಿ ಗ್ಲೌಸ್ ಹೊಂದಿರಬೇಕು. ೨೬ ಸುತ್ತುಗಳ ಮತ ಎಣಿಕೆ ನಂತರ ಐದು ವಿವಿ ಪ್ಯಾಡ್ ಪೇಪರ್ ಎಣಿಕೆ ನಂತರ ಫಲಿತಾಂಶ ಪ್ರಕಟಿಸಲಾಗುತ್ತದೆ.
ಮಸ್ಕಿ ವಿಧಾನಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾದ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿಯಾದ ಬಸವನಗೌಡ ತುರ್ವಿಹಾಳ ಸೇರಿದಂತೆ ಒಟ್ಟು ೮ ಜನರ ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಇನ್ನೂ ೪೮ ಗಂಟೆ ಬಾಕಿ ಉಳಿದಿದೆ. ಮಸ್ಕಿ ಉಪ ಚುನಾವಣೆ ಫಲಿತಾಂಶದ ಬಗ್ಗೆ ಕುತೂಹಲ ತೀವ್ರವಾಗಿದ್ದು, ಈಗಾಗಲೇ ಬೆಟ್ಟಿಂಗ್ ಕಟ್ಟಲಾಗಿದೆ. ಮೇ.೦೨ ರಂದು ಈ ಫಲಿತಾಂಶ ಪ್ರಕಟಣೆ ಎಲ್ಲಾ ಕುತೂಹಲಕ್ಕೆ ತೆರೆ ಎಳೆಯಲಿದೆ.