ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನನಿಶಾಂತ್ ಜಿಲ್ಲೆಗೆ ಟಾಪರ್

ಕೋಲಾರ,ಜೂ,೭- ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನದಲ್ಲಿ ೬೨೪ ಅಂಕ ಗಳಿಸಿರುವ ಮುಳಬಾಗಿಲು ಪಟ್ಟಣದ ಅಮರಜ್ಯೋತಿ ಶಾಲೆಯ ವಿದ್ಯಾರ್ಥಿ ಕೆ.ನಿಶಾಂತ್ ಶ್ರೀವಾತ್ಸವ್ ಜಿಲ್ಲೆಗೆ ಟಾಪರ್ ಹಾಗೂ ರಾಜ್ಯಕ್ಕೆ ಎರಡನೇಯವರಾಗಿ ಹೊರ ಹೊಮ್ಮಿದ್ದಾರೆ.
ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ವಿ.ಕೃಷ್ಣಪ್ಪ ಹಾಗೂ ಡಿ.ಲಕ್ಷ್ಮಿ ದಂಪತಿ ಪುತ್ರರಾಗಿರುವ ಕೆ.ನಿಶಾಂತ್ ಶ್ರೀವಾತ್ಸವ್‌ಗೆ ಇದೀಗ ಸಮಾಜ ವಿಜ್ಞಾನ ಒಂದು ವಿಷಯದಲ್ಲಿ ಮಾತ್ರ ೯೯ ಅಂಕ ಬಂದಿದ್ದು, ಉಳಿದ ಐದು ವಿಷಯಗಳಲ್ಲೂ ಶೇ.೧೦೦ ಸಾಧನೆ ಮಾಡಿದ್ದಾರೆ.
ಈ ವಿದ್ಯಾರ್ಥಿ ತನಗೆ ಮೌಲ್ಯಮಾಪನದಲ್ಲಿ ಅನ್ಯಾಯವಾಗಿದೆ ಎಂದು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದು, ಈತನಿಗೆ ಗಣಿತದಲ್ಲಿ ೬ ಅಂಕ, ವಿಜ್ಞಾನದಲ್ಲಿ ೨ ಅಂಕ, ಸಮಾಜ ವಿಜ್ಞಾನದಲ್ಲಿ ೩ಅಂಕ ಸೇರಿ ಒಟ್ಟು ೧೧ ಅಂಕಗಳು ಹೆಚ್ಚುವರಿಯಾಗಿ ಬಂದಿದೆ. ಈ ಮೊದಲು ೬೨೫ಕ್ಕೆ ೬೧೩ ಅಂಕ ಗಳಿಸಿದ್ದ ಈ ವಿದ್ಯಾರ್ಥಿ ಇದೀಗ ೬೨೪ ಅಂಕ ಪಡೆದು ಜಿಲ್ಲೆಗೆ ಮೊದಲಿಗನಾಗಿ ಹೊರಹೊಮ್ಮಿದ್ದಾರೆ.
ಕನ್ನಡದಲ್ಲಿ ೧೨೫, ಇಂಗ್ಲೀಷ್-೧೦೦, ಹಿಂದಿ-೧೦೦, ಗಣಿತ-೧೦೦, ವಿಜ್ಞಾನ-೧೦೦, ಸಮಾಜವಿಜ್ಞಾನ-೯೯ ಅಂಕ ಗಳಿಸುವ ಮೂಲಕ ಈ ವಿದ್ಯಾರ್ಥಿ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು, ಜಿಲ್ಲೆಗೆ ಟಾಪರ್ ಆಗಿರುವ ನಿಶಾಂತ್ ಶ್ರೀವಾತ್ಸವ್ ಅವರನ್ನು ಡಿಡಿಪಿಐ ಕೃಷ್ಣಮೂರ್ತಿ,ಡಿವೈಪಿಸಿಗಳಾದ ಚಂದ್ರಕಲಾ, ಶಾಂತಲಾ,ಬಿಇಒಗಳಾದ ಕನ್ನಯ್ಯ, ಗಂಗರಾಮಯ್ಯ, ಎವೈಪಿಸಿ ಮೋಹನ್‌ಬಾಬು, ಎಸ್ಸೆಸ್ಸೆಲ್ಸಿ ಜಿಲ್ಲಾ ನೋಡಲ್ ಅಧಿಕಾರಿ ಶಂಕರೇಗೌಡ, ವಿಷಯ ಪರಿವೀಕ್ಷಕರಾದ ಗಾಯತ್ರಿ ಶಶಿವಧನ, ಬಿ.ವೆಂಕಟೇಶಪ್ಪ ಮತ್ತಿತರರು ಅಭಿನಂದಿಸಿದ್ದಾರೆ.