ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪ್ರೇರಣಾ ಕಾರ್ಯಾಗಾರ

ಕೋಲಾರ,ಜ,೧೧- ನಿರಂತರ ಕಲಿಕೆಗೆ ಶ್ರದ್ಧೆ, ಆಸಕ್ತಿ ಬೆಳೆಸಿಕೊಳ್ಳಿ ಸಮಯ ವ್ಯರ್ಥ ಮಾಡದಿರಿ ನಿಮ್ಮ ಪೋಷಕರ ನಿರೀಕ್ಷೆ ಹುಸಿಯಾಗಿಸದೇ ಸಾಧಕರಾಗಿ ಹೊರಹೊಮ್ಮಿ ಎಂದು ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಕರೆ ನೀಡಿದರು.
ಜಿಲ್ಲೆಯ ಯಲ್ದೂರು ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಪ್ರೇರಣಾ ಕಾರ್ಯಾಗಾರದಲ್ಲಿ ೧೦ ಶಾಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
ಎಸ್ಸೆಸ್ಸೆಲ್ಸಿ ಜೀವನದ ಪ್ರಮುಖ ಘಟ್ಟವಾಗಿದ್ದು, ಮಕ್ಕಳು ಪಠ್ಯದೊಂದಗೆ ಸಂಸ್ಕಾರ ಕಲಿಯಿರಿ, ಪಠ್ಯ ಓದಲು ವೇಳಾಪಟ್ಟಿ ಹಾಕಿಕೊಂಡು ಅಧ್ಯಯನ ಮಾಡಿ, ನಿಮ್ಮ ಮುಂದಿನ ಗುರಿ ಸಾಧನೆಗೆ ಇದು ಅಡಿಪಾಯವಾಗಲಿದ್ದು, ಗೊಂದಲಗಳಿದ್ದರೆ ಶಿಕ್ಷಕರನ್ನು ಕೇಳಿ ಪರಿಹರಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ನಿಮ್ಮ ಹೆತ್ತವರು ತಮ್ಮ ಬದುಕು ಸವೆಸಿ ನಿಮ್ಮನ್ನು ಶಾಲೆಗೆ ಕಳುಹಿಸಿದ್ದಾರೆ, ಅವರ ನಿರೀಕ್ಷೆ ನಿಮ್ಮನ್ನು ಸಾಧಕರಾಗಿ ಕಾಣುವುದಾಗಿದೆ ಎಂಬುದನ್ನು ಮರೆಯದಿರಿ ಅವರ ಆಶಯಗಳನ್ನು ಈಡೇರಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂಬುದನ್ನು ಅರಿತು ಶ್ರದ್ಧೆಯಿಂದ ಓದಿ ಶೇ.೧೦೦ ಸಾಧನೆಯ ಗುರಿ ಸಾಧಿಸಿ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನಕ್ಕೆ ಬರಲು ಕಾರಣರಾರಿ ಎಂದು ಕಿವಿಮಾತು ತಿಳಿಸಿದರು.
ಸಾಧನೆ ಸಾಧಕನ ಸ್ವತ್ತು ಅದು ಎಂದಿಗೂ ಸೋಮಾರಿಯ ಸ್ವತ್ತಲ್ಲ ಎಂಬುದನ್ನು ಅರಿಯಿರಿ, ಪರೀಕ್ಷೆ ಮುಗಿಯುವವರೆಗೂ ಪ್ರತಿ ಕ್ಷಣವೂ ಅಮೂಲ್ಯ ಎಂದು ತಿಳಿದು ಅಭ್ಯಾಸ ಮಾಡಿ ಎಂದ ಅವರು ಶಿಕ್ಷಕರು ಬದ್ದತೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದ ಅವರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕುರಿತು ಹೆಚ್ಚಿನ ನಿಗಾ ವಹಿಸಲು ಸೂಚಿಸಿದರು.
ಶ್ರೀನಿವಾಸಪುರ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿಲಕ್ಷ್ಮಯ್ಯ ಮಾತನಾಡಿ, ಪಠ್ಯದಷ್ಟೇ ಆಟೋಟಗಳು ಉತ್ತಮ ಆರೋಗ್ಯ ಜೀವನಕ್ಕೆ ಅಗತ್ಯ ಎಂಬುದು ಸತ್ಯ ಆದರೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರವಾಗುತ್ತಿರುವುದರಿಂದ ಸ್ವಲ್ಪ ಮಟ್ಟಿಗೆ ಆಟೋಟಗಳಿಗೆ ವಿರಾಮ ಹಾಕಿ, ಪಠ್ಯದ ಕಡೆ ಹೆಚ್ಚಿನ ಗಮನ ಹರಿಸಿ ತಾಲ್ಲೂಕಿಗೆ ಉತ್ತಮ ಫಲಿತಾಂಶ ತನ್ನಿ ಎಂದು ಕರೆ ನೀಡಿದರು.
ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ, ಗಣಿತ ವಿಷಯದ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿ, ಪರೀಕ್ಷಾ ಕೇಂದ್ರಗಳ ಪುನರಚನೆ ಮಾಡಲಾಗಿದೆ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್ಸೆಸ್ಸೆಲ್ಸಿ ಮಕ್ಕಳ ಅನುತ್ತೀರ್ಣತೆ ತಪ್ಪಿಸಲು ಮೂರು ಪರೀಕ್ಷೆ ನಡೆಸುತ್ತಿದೆ ಎಂದರು.
ತಾಲ್ಲೂಕು ಪರೀಕ್ಷಾ ನೋಡಲ್ ಅಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ,ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಕೆಲವು ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ, ಇದನ್ನು ತಡೆಯಲು ಹೊರಗೆ ಮಾಡಿದ ತಿಂಡಿ ತಿನ್ನದಿರಿ, ಮನೆ ಅಥವಾ ಶಾಲೆಯಲ್ಲಿ ಮಾಡಿದ ಬಿಸಿಯೂಟ ಸೇವಿಸಿ, ಶುದ್ದ ಕುಡಿಯುವ ನೀರು ಕುಡಿಯಲು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ನಂಬಿಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಬಾಲಕೃಷ್ಣರಾವ್, ಮಾಸ್ತಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಅಶೋಕ್ ಕುಮಾರ್, ಶ್ರೀನಿವಾಸಪುರ ಬಾಲಕಿಯರ ಪದವಿ ಪೂರ್ವ ಕಾಲೇಜು ಶಿಕ್ಷಕ ಆರ್ ಸುಬ್ರಮಣಿ ಕಾರ್ಯನಿರ್ವಹಿಸಿ ಮಕ್ಕಳ ಗೊಂದಲ ಪರಿಹರಿಸಿದರು. ಸಂವಾದದಲ್ಲಿ ಯಲ್ದೂರು ಸುತ್ತಮುತ್ತಲ ೧೦ ಶಾಲಗಳ ಮಕ್ಕಳು ಪಾಲ್ಗೊಂಡಿದ್ದರು.