ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಆದ್ಯತೆ ನೀಡಿ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಆ.09 : ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಎಲ್ಲ ಪ್ರೌಢಶಾಲೆಗಳ ಶಿಕ್ಷಕರು ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ. ಪೂಜಾರ ಹೇಳಿದರು.
ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಸಪಪೂ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿಯ ಫಲಿತಾಂಶ ಉತ್ತಮಗೊಳಿಸಲು ಇಲಾಖೆ ಜಾರಿಗೊಳಿಸಿರುವ ಎಲ್ಲ ಶೈಕ್ಷಣಿಕ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬೆಳಿಗ್ಗೆ 9 ರಿಂದ 10 ಗಂಟೆವರೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಬೇಕು. ವಿಶೇಷವಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರ ಪ್ರಗತಿಗೆ ಆದ್ಯತೆ ನೀಡಬೇಕು. ತರಗತಿಗಳಿಗೆ ಸತತ ಗೈರಾಗುವ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಪಾಲಕರಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವಿನಾಶ ಗೋಟ್ಕಿಂಡಿ, ಬಾಲ್ಯ ವಿವಾಹ, ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ಕಾನೂನು ಅರಿವಿನ ಮಾಹಿತಿ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎ. ಕೋಟೆಪ್ಪ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಪಿ. ಪ್ರಕಾಶ್ ಮಾತನಾಡಿದರು. ಸೊಪ್ಪಿನ ಕಾಳಮ್ಮ ಬಾಲಕಿಯರ ಸಪಪೂ ಕಾಲೇಜಿನ ಉಪ ಪ್ರಾಚಾರ್ಯ ಕೆ.ಚಂದ್ರೇಗೌಡ ಉಪಸ್ಥಿತರಿದ್ದರು. ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಹೆಚ್.ಮಲ್ಲಿಕಾರ್ಜುನ ನಿರ್ವಹಿಸಿದರು.