ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸಾಧನೆಗೈದ 6 ವಿದ್ಯಾರ್ಥಿನಿಯರಿಗೆ ಸನ್ಮಾನ

ಕಂಪ್ಲಿ ನ 01 : ಪಟ್ಟಣದ ತಹಸಿಲ್ ಕಚೇರಿ ಆವರಣದಲ್ಲಿ ಭಾನುವಾರದಂದು ತಹಸೀಲ್ದಾರ್ ಗೌಸಿಯಾಬೇಗಂ ಅಧ್ಯಕ್ಷತೆಯಲ್ಲಿ ಅತ್ಯಂತ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ತಹಸೀಲ್ದಾರ್ ಗೌಸಿಯಾಬೇಗಂ ಮಾತನಾಡಿ, ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ದಿನವಾದ ನವೆಂಬರ್ 1ನ್ನು ಕನ್ನಡಿಗರ ನಾಡಹಬ್ಬ ಕನ್ನಡ ರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತಿದೆ. ಕನ್ನಡ ಭಾಷೆಯ ಘಮಲು ಇಡೀ ವಿಶ್ವದಾದ್ಯಂತ ಪಸರಿಸಿದ್ದು, ತನ್ನದೇ ಆದ ವಿಶೇಷ ಛಾಪು ಮೂಡಿಸಿದೆ ಎಂದರು.
ಕಾರ್ಯಕ್ರಮ ಬಳಿಕ ತಾಲೂಕಿನ ರಾಮಸಾಗರ ಗ್ರಾಮದ ಸ.ಹಿ.ಪ್ರೌ.ಶಾಲೆ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಶೇ.100ರಷ್ಟು ಸಾಧನೆ ದಾಖಲಿಸಿದ ಹಿನ್ನೆಲೆ ಶಾಲೆಯ ಮುಖ್ಯಗುರು ಅಕ್ಕಮಹಾದೇವಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಅಲ್ಲದೇ ಎಸ್‍ಎಸ್‍ಎಲ್‍ಸಿಯ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳಿಸಿ ಸಾಧನೆಗೈದ 4 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಇಬ್ಬರು ವಿದ್ಯಾರ್ಥಿನಿಯರಿಗೆ ತಾಲೂಕಾಡಳಿತ ವತಿಯಿಂದ ಲ್ಯಾಪ್‍ಟಾಪ್ ವಿತರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಬಿ.ರವೀಂದ್ರ ಕುಮಾರ್, ಶಿರಸ್ತೇದಾರ ರೇಖಾ, ಗ್ರಾಮಲೆಕ್ಕಾಧಿಕಾರಿಗಳಾದ ಕೆ.ಮಂಜುನಾಥ, ಗಿರೀಶ್‍ಬಾಬು, ಕೆ.ಜಿಲಾನ್, ಲಕ್ಷ್ಮಣನಾಯ್ಕ್, ಶಿವರುದ್ರಯ್ಯ, ಮಹಮ್ಮದ್ ಶರೀಫ್, ವೆಂಕಟೇಶ್, ಎಚ್.ಮಂಜುನಾಥ, ವಿರೂಪಾಕ್ಷಿಗೌಡ, ತಾಲೂಕು ಕಚೇರಿ ಸಿಬ್ಬಂದಿಗಳಾದ ಮಾಲತೇಶ್, ಗಣೇಶ್, ವನಿತಾ, ವೈಷ್ಣವಿ ಸೇರಿದಂತೆ ಅನೇಕರಿದ್ದರು.