ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಬಾರಿ ಪರೀಕ್ಷೆ

ಬೆಂಗಳೂರು, ಸೆ.೫-ಎಸ್‌ಎಸ್‌ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅನುತ್ತೀರ್ಣ ಆದರೆ, ವರ್ಷಕ್ಕೆ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದಾರೆ.
ನಗರದಲ್ಲಿಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಜಂಟಿಯಾಗಿ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ೪೩ ಮಂದಿ ಪುರಸ್ಕೃತ ಶಿಕ್ಷಕರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಹತ್ತನೆ ತರಗತಿಯಲ್ಲಿ ಮೂರು ಬಾರಿ ಪರೀಕ್ಷೆ ತೆಗೆದು ಕೊಳ್ಳಬಹುದು. ಯಾವುದೇ ಕಾರಣಕ್ಕೂ ಮಕ್ಕಳಿಗೆ ಒಂದು ವರ್ಷ ವ್ಯರ್ಥ ಆಗಬಾರದು ಎಂದು ವರ್ಷದಲ್ಲಿ ಮೂರು ಬಾರಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಯಾವುದೋ ಒಂದು ಕಾರಣಕ್ಕೆ ವಿದ್ಯಾರ್ಥಿಗಳು ಅನುತ್ತೀರ್ಣ ರಾದರೆ ಇಡೀ ವರ್ಷ ಅವರ ಜೀವನ ವ್ಯರ್ಥವಾಗಬಾರದು. ಪರೀಕ್ಷೆಗಳು ಮಕ್ಕಳನ್ನು ಫೇಲ್ ಮಾಡೋದಕ್ಕಲ್ಲ, ಜೀವನದ ಬಗ್ಗೆ ಕಲಿಕೆಗಾಗಿ ಇರಬೇಕು ಎಂದು ವಿಶ್ಲೇಷಿಸಿದ ಅವರು,
ಇದರಿಂದ ಫೇಲ್ ಆದ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆದು ಉತ್ತೀರ್ಣರಾಗಲು ಅವಕಾಶ ಸಿಗುತ್ತದೆ ಹಾಗೂ ಕಡಿಮೆ ಅಂಕ ಪಡೆದವರು ಓದಿ ಮತ್ತೆ ಹೆಚ್ಚು ಅಂಕ ಗಳಿಸಲು ಸಾಧ್ಯ ವಾಗುತ್ತದೆ ಎಂದು ಉಲ್ಲೇಖಿಸಿದರು.
ಶಾಲಾ ಶಿಕ್ಷಕರಿಗೆ ಇಪ್ಪತ್ತು, ಪ್ರೌಢ ಶಾಲಾ ಶಿಕ್ಷಕರಿಗೆ ೨೦ ಪ್ರಶಸ್ತಿ, ವಿಶೇಷ ಶಿಕ್ಷಕರಿಗೆ ಇಬ್ಬರು ಸೇರಿದಂತೆ ೩೧ ಉತ್ತಮ ಶಿಕ್ಷಕರಿಗೆ ರಾಜ್ಯ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗಿದೆ.
ಶಾಲೆಗೆ ಹೋಗೋದಕ್ಕೆ ಮಕ್ಕಳಿಗೆ ಶಕ್ತಿ ಬೇಕು. ಮುಂಚೆ ಮೊಟ್ಟೆ ವಾರಕ್ಕೆ ಒಂದು ಕೊಡುತ್ತಿದ್ದೆವು. ಈಗ ೧ನೇ ತರಗತಿಯಿಂದ ೮ನೇ ತರಗತಿಯವರೆಗೆ ಒಂದು ಮೊಟ್ಟೆ ಕೊಡಲಾಗುತ್ತಿತ್ತು. ೧೦ನೇ ತರಗತಿವರೆಗೆ ವಾರಕ್ಕೆ ಎರಡು ಮೊಟ್ಟೆಯನ್ನು ಕೊಡುವಂತ ನಿರ್ಧಾರವನ್ನು ಸಿಎಂ ಸಿದ್ಧರಾಮಯ್ಯ ಮಾಡಿದರು. ೫೮ ಲಕ್ಷ ಮಕ್ಕಳಿಗೆ ಈಗ ರಾಜ್ಯ ಮಟ್ಟದಲ್ಲಿ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ ಎಂದರು.
ಶಿಕ್ಷಕರ ವರ್ಗಾವಣೆಯ ನಂತ್ರ ಕೆಲವೆಡೆ ಶಿಕ್ಷಕರ ಕೊರತೆ ಉಂಟಾಯಿತು. ಸಿಎಂ ಸಿದ್ಧರಾಮಯ್ಯ ಅವರು ಈ ವಿಚಾರ ಗಮನಿಸಿ, ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ನೀಡಿದರು. ೪೩ ಸಾವಿರ ಮಂದಿ ಈಗ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ೪೩ ಮಂದಿ ಪುರಸ್ಕೃತ ಶಿಕ್ಷಕರುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಶಾಸಕ ರಿಜ್ವಾನ್ ಅರ್ಷದ್ ಅವರು ಅಧ್ಯಕ್ಷತೆ ವಹಿಸಿದ್ದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಹಲವು ಹಾಲಿ, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.