
ಕೋಲಾರ,ಸೆ,೩:ಎಸ್ಸೆಸ್ಸೆಲ್ಸಿಯಲ್ಲಿ ಸಾಧಕರಾಗಿ ಹೊರಹೊಮ್ಮಲು ಪಠ್ಯಪುಸ್ತಕ ಅಭ್ಯಾಸ ಮಾಡಿ, ಪ್ರತಿಕ್ಷಣವೂ ಮಹತ್ವದ್ದಾಗಿದ್ದು, ಪಠ್ಯ ಓದಿಗೆ ವೇಳಾಪಟ್ಟಿ ಹಾಕಿಕೊಂಡು ಅದರಂತೆ ಓದಿದರೆ ಯಶಸ್ಸು ನಿಮ್ಮನ್ನು ತಾನಾಗಿಯೇ ವರಿಸುತ್ತದೆ ಎಂದು ನಿವೃತ್ತ ಜಿಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಕ್ಕಳಿಗೆ ಕರೆ ನೀಡಿದರು.
ಜಿಲ್ಲೆಯ ಮುಳಬಾಗಿಲು ಪಟ್ಟಣದ ಅಮರಜ್ಯೋತಿ ಶಾಲೆಯಲ್ಲಿ ಪಿಪಿಟಿ ಪ್ರಸೆಂಟೇಷನ್ ಮೂಲಕ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮಾರ್ಗದರ್ಶನ ನೀಡಿದ ನಂತರ ಸಂವಾದ ನಡೆಸಿದ ಅವರು, ಪ್ರಶ್ನೆಪತ್ರಿಕೆ ಹಿಂದಿನ ವರ್ಷದಷ್ಟು ಸುಲಭವಾಗಿರುವುದಿಲ್ಲ, ನೀವು ಪರಿಶ್ರಮ ಹಾಕಿದರೆ ಮಾತ್ರವೇ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಶಿಕ್ಷಕರ ಬೋಧನೆಯನ್ನು ಗಮನವಿಟ್ಟು ಕೇಳಿ, ಜತೆಗೆ ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ, ಅನ್ವಯಿಕ ಪ್ರಶ್ನೆಗಳಿಗೆ ಉತ್ತರ ಬರೆಯಲು ಇದು ಹೆಚ್ಚು ಸಹಕಾರಿ ಎಂದು ತಿಳಿಸಿ, ಶೇ.೧೦೦ ಸಾಧನೆಗೆ ಪಠ್ಯಪುಸ್ತಕ ಓದು ಅತಿ ಅವಶ್ಯ ಎಂದು ಹೇಳಿದರು.
ಉತ್ತಮ ಬರವಣಿಗೆ ನಿಮ್ಮ ಸಾಧನೆಗೆ ಸ್ಪೂರ್ತಿಯಾಗಲಿದೆ, ವಿದ್ಯಾರ್ಥಿಗಳು ಬರವಣಿಗೆ ಉತ್ತಮಪಡಿಸಿಕೊಳ್ಳಲು ನಿರಂತರವಾಗಿ ಪಠ್ಯದಲ್ಲಿರುವುದನ್ನೇ ಬರೆದು ಅಭ್ಯಾಸ ಮಾಡಿ, ಬರವಣಿಗೆ ಉತ್ತಮವಾಗಿದ್ದರೆ ಮಾತ್ರ ಶೇ.೧೦೦ ಅಂಕ ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆಯಲ್ಲಿ ಈ ಬಾರಿ ಕಠಿಣ ಪ್ರಶ್ನೆಗಳ ಪ್ರಮಾಣ ಹೆಚ್ಚಾಗಲಿದೆ, ಕಳೆದಬಾರಿಯಷ್ಟು ಸುಲಭವಂತಗೂ ಅಲ್ಲ, ಶ್ರದ್ಧೆ ವಹಿಸಿ ಓದಿ, ನಿಮ್ಮ ದೈನಂದಿನ ಕಲಿಕೆಗಾಗಿ ನೀವೇ ವೇಳಾಪಟ್ಟ ಸಿದ್ದಪಡಿಸಿಕೊಳ್ಳಿ, ಅದರಂತೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದರು.
ಫಲಿತಾಂಶ ಉತ್ತಮಪಡಿಸುವುದರ ಜತೆಗೆ ಪ್ರತಿ ವಿದ್ಯಾರ್ಥಿಯೂ ಉತ್ತಮ ಸಾಧನೆ ಮಾಡಬೇಕು ಎಂಬ ಕಾತರ ಶಿಕ್ಷಕರಲ್ಲಿದೆ, ಅವರ ಆಶಯಗಳಿಗೆ ತಕ್ಕಂತೆ ನೀಡು ನಡೆದುಕೊಳ್ಳಬೇಕು, ಶಾಲೆಗೆ ಗೈರಾಗಬಾರದು, ಅಂದಿನ ಪಾಠ ಅಂದೇ ಓದಿ ಮುಗಿಸಿ ಎಂದು ಕಿವಿಮಾತು ಹೇಳಿದರು.
ಅಮರಜ್ಯೋತಿ ಶಾಲೆ ಪ್ರತಿ ವರ್ಷವೂ ಶೇ.೧೦೦ ಸಾಧನೆಯೊಂದಿಗೆ ಉತ್ತಮ ಫಲಿತಾಂಶ ಪಡೆಯುತ್ತಿದೆ, ಇದರ ಜತೆಗೆ ಗುಣಾತ್ಮಕತೆಯಲ್ಲೂ ಸಾಧನೆ ಮಾಡಿದೆ ಎಂದ ಅವರು, ಶಿಕ್ಷಕರ ಪರಿಶ್ರಮಕ್ಕೆ ಫಲ ಸಿಗಲು ವಿದ್ಯಾರ್ಥಿಗಳು ಸಹಾ ಕಲಿಕೆಗೆ ಒತ್ತು ನೀಡಬೇಕೆಂದರು.ಶಾಲೆಯ ಕಾರ್ಯದರ್ಶಿ ಅಶೋಕ್, ಪ್ರಾಂಶುಪಾಲ ಚಂಗಾರೆಡ್ಡಿ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು ಹಾಜರಿದ್ದರು.