ಎಸ್ಸೆಸ್ಸೆಲ್ಸಿ ಪರೀಕ್ಷೆ:ವಿಡಿಯೋ ಸಂವಾದ ಸಭೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ21: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತಾ ವಿಡಿಯೋ ಸಂವಾದ ಸಭೆ ಬುಧವಾರ ನಡೆಯಿತು. ಜಿಲ್ಲೆಯಲ್ಲಿ ಪರೀಕ್ಷೆ ಹಮ್ಮಿಕೊಳ್ಳಲು ಕೈಗೊಂಡ ಸಿದ್ಧತೆ ಬಗ್ಗೆ ಮಾಹಿತಿ ಪಡೆದುಕೊಂಡು. ವೆಬ್ ಕಾಸ್ಟಿಂಗ್ ಮೂಲಕ ನಿಗಾವಹಿಸುವಂತೆ ನಿರ್ದೇಶಿಸಿದರು.
ವಿಜಯನಗರ ಜಿಲ್ಲೆಯ 6 ತಾಲೂಕುಗಳಲ್ಲಿನ 35 ಸರಕಾರಿ ಪ್ರೌಢ ಶಾಲೆಗಳು, 11 ಅನುದಾನಿತ ಪ್ರೌಢ ಶಾಲೆಗಳು, 19 ಅನುದಾನರಹಿತ ಪ್ರೌಢ ಶಾಲೆಗಳು ಸೇರಿ ಒಟ್ಟು 65 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ. ಹೊಸಪೇಟೆಯಲ್ಲಿ 18, ಹಗರಿಬೊಮ್ಮನಹಳ್ಳಿ 10, ಹೂವಿನ ಹಡಗಲಿ 9, ಹರಪನಳ್ಳಿ 13, ಕೂಡ್ಲಿಗಿಯಲ್ಲಿ 15 ಕೇಂದ್ರಗಳನ್ನು ಆರಂಭಿಸಲಾಗಿದೆ. ಗುರುದೇವ ಪ್ರೌಢಶಾಲೆ ಕೊಟ್ಟೂರು, ಚಿಕ್ಕ ಜೋಗಿಹಳ್ಳಿ ಸರಕಾರಿ ಪ್ರೌಢಶಾಲೆ ಕೇಂದ್ರಗಳನ್ನು ಸೂಕ್ಷ ಕೇಂದ್ರಗಳೆಂದು ಗುರುತಿಸಲಾಗಿದೆ. 65 ಮುಖ್ಯ ಅಧೀಕ್ಷಕರು, 22 ಉಪ ಮುಖ್ಯ ಅಧೀಕ್ಷಕರು, 65 ಪ್ರಶ್ನೆ ಪತ್ರಿಕೆ ಪಾಲಕರು, 22 ಮಾರ್ಗಗಳಿಗೆ 22 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ.
ಜಿಲ್ಲೆಯಲ್ಲಿ 21,768 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 919 ಪರೀಕ್ಷೆ ಕೊಠಡಿಗಳ ಪೈಕಿ 851 ಕೊಠಡಿಗಳಿಗೆ ಸಿ.ಸಿ.ಟಿ.ವಿ. ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲೆಯ ಅಧಿಕಾರಿಗಳು ಪ್ರಧಾನ ಕಾರ್ಯದರ್ಶಿಗೆ ಮಾಹಿತಿ ನೀಡಿದರು.
ಈ ವಿಡಿಯೋ ಸಂವಾದದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸದಾಶಿವು ಪ್ರಭು ಬಿ ಅಪರ ಜಿಲ್ಲಾಧಿಕಾರಿಗಳಾದ ಅನುರಾಧ.ಜಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಯುವರಾಜ್ ನಾಯ್ ಮತ್ತು ಜಿಲ್ಲೆಯ ತಾಲೂಕುಗಳ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.