ಎಸ್ಸೆಸ್ಸೆಲ್ಸಿ ಪರೀಕ್ಷಾ ಸಾಧನೆ : ಚೆಕ್ ವಿತರಣೆ

ಧಾರವಾಡ,ನ.8: ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಅಭಿಯಾನ ಹಾಗೂ ನಗರದ ಜನಮುಖಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆಗೈದ ಜಿಲ್ಲೆಯ ದಿವ್ಯಾಂಗ ಮಕ್ಕಳಿಗೆ ಅವರ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ತಲಾ 5 ಸಾವಿರ ರೂ.ಗಳ ಚೆಕ್ ವಿತರಿಸಲಾಯಿತು.
ಶಹರ ವಲಯದ ಶಾಲಾ ಸಿದ್ದತಾ ಕೇಂದ್ರದ ದಿವ್ಯಾಂಗ ವಿದ್ಯಾರ್ಥಿಗಳಾದ ನಾಗನಗೌಡ ಪಾಟೀಲ್, ಮಂಜುಳಾ ನವಲಗುಂದ, ವಿರೇಂದ್ರ ಪತ್ತಾರ, ಭುವನೇಶ್ವರಿ ಮಾನಕರ ಹಾಗೂ ಚಾಣಕ್ಯ ಗೆದಗೇರಿ ಅವರು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮಾಡಿದ ಸಾಧನೆ ಪರಿಗಣಿಸಿ ಜನಮುಖಿ ಸಂಸ್ಥೆಯು ಈ 5 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ.ಗಳ ಚೆಕ್ ನೀಡಿ ಪ್ರೋತ್ಸಾಹಿಸಿತು. ಇದೇ ಸಂದರ್ಭದಲ್ಲಿ ಜಿಲ್ಲೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪಾಸಾದ ಎಲ್ಲ ದಿವ್ಯಾಂಗ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕಾರ್ಯಾಗಾರ : ಎಸ್.ಎಸ್.ಎಲ್.ಸಿ. ನಂತರ ಮುಂದೇನು? ಎಂಬ ವಿಷಯದ ಕುರಿತು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಡಿ. ಎನ್. ಮೂಲಿಮನಿ ಮಾತನಾಡಿದರು. ಆರ್.ಎಂ.ಎಸ್.ಎ. ಜಿಲ್ಲಾ ಉಪಯೋಜನಾಧಿಕಾರಿ ಎಸ್. ಎಂ. ಹುಡೇದಮನಿ, ಎಸ್.ಎಸ್.ಎ. ಜಿಲ್ಲಾ ಉಪಯೋಜನಾಧಿಕಾರಿ ಪ್ರಮೋದ ಮಹಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ಮತ್ತು ಉಮೇಶ ಬೊಮ್ಮಕ್ಕನವರ, ಜನಮುಖಿ ಸಂಸ್ಥೆಯ ಅಧ್ಯಕ್ಷೆ ಬಸಂತಿ ಹಪ್ಪಳದ, ಕಾರ್ಯದರ್ಶಿ ಬಸವರಾಜ ಮ್ಯಾಗೇರಿ, ಬಿ.ಆರ್.ಪಿ. ಅರುಣ ನವಲೂರ, ಬಿ.ಐ.ಇ.ಆರ್.ಟಿ.ಗಳಾದ ಸುಮಿತಾ ಹಿರೇಮಠ, ಗಿರಿಜಾ ಪಾಟೀಲ, ಎಂ.ಪಿ. ದೊಡಮನಿ, ಎಸ್. ಎಸ್. ಜೋಶಿ, ದಿವ್ಯಾಂಗ ಮಕ್ಕಳು ಮತ್ತು ಪಾಲಕರು ಇದ್ದರು.