ಎಸ್ಸೆಸ್ಸೆಲ್ಸಿ: ಜಿಲ್ಲೆಗೆ ಎ.ಎಸ್.ಪೂರ್ವಿ ಪ್ರಥಮ

ಕೋಲಾರ, ಮೇ,೯- ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಗೆ ಮೊದಲಿಗಳಾಗಿರುವ ಎ.ಎಸ್.ಪೂರ್ವಿ ಮುಳಬಾಗಿಲು ಅಮರಜ್ಯೋತಿ ಶಾಲೆಯ ವಿದ್ಯಾರ್ಥಿನಿ ಹಾಗೂ ಪಟ್ಟಣದ ಅಯ್ಯಪ್ಪ ಹಾಗೂ ಸರಿತಾ ದಂಪತಿಗಳ ಪುತ್ರಿಯಾಗಿದ್ದು, ಈಕೆ ೬೨೪ ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗಳಾಗಿದ್ದು, ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗುವ ಆಶಯ ವ್ಯಕ್ತಪಡಿಸಿದ್ದಾರೆ.
ಈ ವಿದ್ಯಾರ್ಥಿನಿ ಕನ್ನಡ-೧೨೫, ಇಂಗ್ಲೀಷ್-೧೦೦, ಗಣಿತ-೧೦೦, ವಿಜ್ಞಾನ-೧೦೦, ಹಿಂದಿ-೧೦೦ ಹಾಗೂ ಸಮಾಜವಿಜ್ಞಾನದಲ್ಲಿ ೯೯ ಅಂಕ ಗಳಿಸಿದ್ದಾರೆ.
ತಾಯಿ ಆರ್.ಸರಿತಾ ಮುಳಬಾಗಿಲು ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ ತಂದೆ ಕೆ.ಅಯ್ಯಪ್ಪ ಮುಳಬಾಗಿಲು ತಾಲ್ಲೂಕಿನ ವಿರುಪಾಕ್ಷಿಯಲ್ಲಿ ಶಿಕ್ಷಕರಾಗಿದ್ದು, ತಮ್ಮ ಮಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿ ಮಾತನಾಡಿ, ತನ್ನ ಈ ಸಾಧನೆಗೆ ಪೋಷಕರು ಹಾಗೂ ಶಿಕ್ಷಕರು ನೀಡಿದ ಪ್ರೋತ್ಸಾಹವೇ ಕಾರಣವಾಗಿದ್ದು, ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಅಮರಜ್ಯೋತಿ ಶಾಲೆಯ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಕಾರ್ಯದರ್ಶಿ ಆರ್.ಅಶೋಕ್‌ಕುಮಾರ್ ಮುಖ್ಯ ಶಿಕ್ಷಕರಾದ ಚಂಗಾರೆಡ್ಡಿ, ಎಂ.ಮುನಿನಾರಾಯಣಪ್ಪ ಮತ್ತಿತರರು ವಿದ್ಯಾರ್ಥಿನಿಗೆ ಶುಭ ಕೋರಿದರು.