ಎಸ್ಸೆಸ್ಸೆಲ್ಸಿಯಲ್ಲಿ ಗುಣಾತ್ಮಕತೆಗೆ ಒತ್ತು -ಡಿಡಿಪಿಐ

ಕೋಲಾರ, ಜೂ. ೨೭:ಎಸ್ಸೆಸ್ಸೆಲ್ಸಿಯಲ್ಲಿ ಕಳೆದ ಆರೇಳು ವರ್ಷಗಳಿಂದ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿಕೊಂಡು ಬಂದಿದ್ದು, ಜಿಲ್ಲೆಯ ಘನತೆಯೂ ಹೆಚ್ಚಿದೆ, ಪ್ರಸ್ತುತ ೨೦೨೩-೨೪ನೇ ಸಾಲಿನಲ್ಲೂ ಗುಣಾತ್ಮಕತೆ ಹಾಗೂ ರಾಜ್ಯದಲ್ಲೇ ಪ್ರಥಮ ಸ್ಥಾನದ ಸಾಧನೆಗೆ ಮತ್ತಷ್ಟು ಒತ್ತು ನೀಡುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಕರೆ ನೀಡಿದರು.
ನಗರದ ಡಿಡಿಪಿಐ ಕಚೇರಿಯಲ್ಲಿ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೨೫ ಅಂಕಗಳಿಗೆ ೬೨೪ ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಟಾಫರ್ ಆಗಿ ಹೊರಹೊಮ್ಮಿರುವ ಕೋಲಾರ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ವಿ.ಕೃಷ್ಣಪ್ಪ ಹಾಗೂ ಡಿ.ಲಕ್ಷ್ಮಿ ದಂಪತಿಗಳ ಪುತ್ರ ಹಾಗೂ ಮುಳಬಾಗಿಲು ಅಮರಜ್ಯೋತಿ ಶಾಲೆ ವಿದ್ಯಾರ್ಥಿ ಕೆ.ನಿಶಾಂತ್ ಶ್ರೀವಾತ್ಸವ್‌ರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ, ಶಾಲೆಗಳಲ್ಲೂ ಸೂಕ್ತ ಕ್ರಿಯಾ ಯೋಜನೆ ರೂಪಿಸಿಕೊಂಡು ೧೦ನೇ ತರಗತಿ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಸಾಧಕ ಮಕ್ಕಳನ್ನು ಪ್ರೋತ್ಸಾಹಿಸುವುದರಿಂದ ಇತರೆ ವಿದ್ಯಾರ್ಥಿಗಳಿಗೂ ಇದು ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ಎಸ್ಸೆಸ್ಸೆಲ್ಸಿ ಅಂಕ ಗಳಿಕೆಗೆ ನಿಮ್ಮ ಗುರಿ ಸೀಮಿತವಾಗದಿರಲಿ ಮುಂದೆ ಇನ್ನೂ ಕಷ್ಟದ ಕಲಿಕೆಗೆ ಒತ್ತು ನೀಡಿ, ಜಿಲ್ಲೆ, ಪೋಷಕರ ಘನತೆ ಹೆಚ್ಚಿಸುವ ರೀತಿ ಸಾಧನೆ ಮಾಡಿ ಎಂದು ಹಾರೈಸಿದರು.
ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನದಲ್ಲಿ ೬೨೪ ಅಂಕ ಗಳಿಸಿರುವ ಮುಳಬಾಗಿಲು ಪಟ್ಟಣದ ಅಮರಜ್ಯೋತಿ ಶಾಲೆಯ ವಿದ್ಯಾರ್ಥಿ ಕೆ.ನಿಶಾಂತ್ ಶ್ರೀವಾತ್ಸವ್ ಸಮಾಜ ವಿಜ್ಞಾನ ಒಂದು ವಿಷಯದಲ್ಲಿ ಮಾತ್ರ ೯೯ ಅಂಕ ಬಂದಿದ್ದು, ಉಳಿದ ಐದು ವಿಷಯಗಳಲ್ಲೂ ಶೇ.೧೦೦ ಸಾಧನೆ ಮಾಡಿದ್ದಾರೆ.
ಈ ವಿದ್ಯಾರ್ಥಿ ತನಗೆ ಮೌಲ್ಯಮಾಪನದಲ್ಲಿ ಅನ್ಯಾಯವಾಗಿದೆ ಎಂದು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದು, ಈತನಿಗೆ ಗಣಿತದಲ್ಲಿ ೬ ಅಂಕ, ವಿಜ್ಞಾನದಲ್ಲಿ ೨ ಅಂಕ, ಸಮಾಜ ವಿಜ್ಞಾನದಲ್ಲಿ ೩ಅಂಕ ಸೇರಿ ಒಟ್ಟು ೧೧ ಅಂಕಗಳು ಹೆಚ್ಚುವರಿಯಾಗಿ ಬಂದಿದೆ. ಈ ಮೊದಲು ೬೨೫ಕ್ಕೆ ೬೧೩ ಅಂಕ ಗಳಿಸಿದ್ದ ಈ ವಿದ್ಯಾರ್ಥಿ ಇದೀಗ ೬೨೪ ಅಂಕ ಪಡೆದು ಜಿಲ್ಲೆಗೆ ಮೊದಲಿಗನಾಗಿ ಹೊರಹೊಮ್ಮಿದ್ದಾರೆ.
ಕನ್ನಡದಲ್ಲಿ ೧೨೫, ಇಂಗ್ಲೀಷ್-೧೦೦, ಹಿಂದಿ-೧೦೦, ಗಣಿತ-೧೦೦, ವಿಜ್ಞಾನ-೧೦೦, ಸಮಾಜವಿಜ್ಞಾನ-೯೯ ಅಂಕ ಗಳಿಸುವ ಮೂಲಕ ಈ ವಿದ್ಯಾರ್ಥಿ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಡಿವೈಪಿಸಿಗಳಾದ ಚಂದ್ರಕಲಾ, ಶಾಂತಲಾ,ಬಿಇಒಗಳಾದ ಕನ್ನಯ್ಯ, ಗಂಗರಾಮಯ್ಯ, ಎವೈಪಿಸಿ ಮೋಹನ್‌ಬಾಬು, ಎಸ್ಸೆಸ್ಸೆಲ್ಸಿ ಜಿಲ್ಲಾ ನೋಡಲ್ ಅಧಿಕಾರಿ ಶಂಕರೇಗೌಡ, ವಿಷಯ ಪರಿವೀಕ್ಷಕರಾದ ಗಾಯತ್ರಿ ಶಶಿವಧನ, ಬಿ.ವೆಂಕಟೇಶಪ್ಪ ಮತ್ತಿತರರು ಅಭಿನಂದಿಸಿದ್ದಾರೆ.