ಎಸ್‍ಸಿ ಪ್ರಮಾಣಪತ್ರಕ್ಕೆ ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ, ಜು 26: ಬೇಡ ಜಂಗಮರಿಗೆ ಎಸ್‍ಸಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಇತ್ತೀಚೆಗೆ ಬೇಡ ಜಂಗಮ ಸಮಾಜದವರು ಪ್ರತಿಭಟನೆ ನಡೆಸಿದರು.
ಬಿ.ಡಿ. ಹಿರೇಮಠ ಅವರ ನೇತೃತ್ವದಲ್ಲಿ, ನಾಡಿನ ನೂರಾರು ಮಠಾಧೀಶರ ಸಮ್ಮುಖದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಬೇಡ ಜಂಗಮ ಸಮಾಜದವರು ಭಾಗವಹಿಸಿದ್ದರು.
ಸಂವಿಧಾನಬದ್ದವಾಗಿ ಎಸ್‍ಸಿ ಮೀಸಲಾತಿ ಪ್ರಮಾಣ ಪತ್ರ ನೀಡಬೇಕು ಎಂದು ಕಳೆದ ಒಂದು ತಿಂಗಳಿನಿಂದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ಇದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಈಗಾಗಲೇ ಬೇಡಿಕೆ ಈಡೇರಿಸುವುದಾಗಿ ಕೆಲ ಸಚಿವರು, ಶಾಸಕರು ಭರವಸೆ ನೀಡಿದ್ದು, ಈವರೆಗೂ ಬೇಡಿಕೆ ಈಡೇರಿಸಿಲ್ಲ. ಮುಂದಿನ ದಿನಗಳಲ್ಲಿ ಎಸ್‍ಸಿ ಮೀಸಲಾತಿ ಪ್ರಮಾಣ ಪತ್ರ ನೀಡದಿದ್ದರೆ, ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಮುಖಂಡ ಬಿ.ಡಿ. ಹಿರೇಮಠ ಮಾತನಾಡಿ, ತಮಗೆ ಎಸ್.ಸಿ ಪ್ರಮಾಣ ಪತ್ರ ನೀಡದಿದ್ದರೆ, ಮುಂಬರುವ ದಿನಗಳಲ್ಲಿ ಬಿಜೆಪಿ ಸರ್ಕಾರ ಶೂನ್ಯ ಸಂಪಾದನೆ ಮಾಡಲಿದೆ ಎಂದು ಗುಡುಗಿದರು. ಅಲ್ಲದೆ ಆಗಸ್ಟ್ 15 ರೊಳಗೆ ಈ ಬಗ್ಗೆ ಕ್ರಮಕ್ಕೆ ಮುಂದಾಗದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.