ಎಸ್ಸಿ ಎಸ್ಟಿ ಮೀಸಲು ಹೆಚ್ಚಳ
ಸಧ್ಯದಲ್ಲೇ ಸಿಹಿ ಸುದ್ದಿ: ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.01: ರಾಜ್ಯದಲ್ಲಿನ ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿ ಸಧ್ಯದಲ್ಲೇ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಲಿದೆ ಎಂದು ಪರಿಶಿಷ್ಠವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಅವರು ಇಂದು ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ಬಳಿ ಏತ ನೀರಾವರಿ ಯೋಜನೆಯ ಕಾಮಗಾರಿ ಉದ್ಘಾಟಿಸಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.
ಸಧ್ಯ ಎಸ್ಸಿಗಳಿಗೆ ಶೇ 15 ಇರುವ ಮೀಸಲಾತಿ ಪ್ರಮಾಣವನ್ನು ಶೇ 17 ಕ್ಕೆ ಹಾಗು ಎಸ್ಟಿಗಳಿಗೆ ಇರುವ ಶೇ 3 ರ ಪ್ರಮಾಣವನ್ನು 7.5 ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಈ ದಿಶೆಯಲ್ಲಿ ಸಧ್ಯದಲ್ಲೇ ಜನತಗೆ ಸರ್ಕಾರ ಸಿಹಿ ಸುದ್ದಿ ನೀಡಲಿದೆಂದು ಹೇಳಿದರು.
ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಸಿ ಚಿತ್ರದುರ್ಗದ ಮುರುಘಾ ಶ್ರೀಗಳ ಬಂಧನ ಕುರಿತಂತೆ ಕೇಳಿದ ಪ್ರಶ್ನೆಗೆ. ಪ್ರಕರಣ ನ್ಯಾಯಾಲಯಲ್ಲಿರುವುದರಿಂದ ಇದಕ್ಕೆ ಪ್ರತಿಕ್ರಿಯೆ ನೀಡಲಾರೆ ಎಂದರು.
ಮೀಸಲಾತಿ ಪ್ರಮಾಣ ಹೆಚ್ಚಳ  ಕುರಿತಂತೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರತಿಯಾಗಿ ತಾವು ಮಾಡಿದ ಟ್ವೀಟ್ ನ್ನು ಸಮರ್ಥಿಸಿಕೊಂಡರು. ಅದನ್ನು ಡೀಲೀಟ್ ಮಾಡಲಾಗಿದೆ ಎಂಬುದು ಸಹ ಸುಳ್ಳು ಎಂದರು.   
ಮೂವತ್ತು ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ ನನಗೆ ಯಾರು ಬುದ್ದಿ ಕಲಿಸೋದು ಬೇಕಿಲ್ಲ. ಪಕ್ಕದಲ್ಲಿ ಅವರ ( ಕಾಂಗ್ರೆಸ್ ಗಣೇಶ) ಶಾಸಕರಿದ್ದಾರೆ ಅವರಿಗೆ ಮುಜುಗರ ಮಾಡಲ್ಲ.
ಅವರೇನು‌ ಮುಖ್ಯಮಂತ್ರಿ ( ಸಿದ್ದರಾಮಯ್ಯ) ಇದ್ದಾಗ ಮೀಸಲಾತಿ ಮಾಡಲಿಲ್ಲವೋ ಅದನ್ನು ನಾವು ಮಾಡ್ತೇವೆಂದರು.
ಶ್ರೀರಾಮುಲು ಮಾತು ಮುಗಿಯುತ್ತಿದ್ದಂತೆಯೇ ಸುದ್ದಿಗಾರರ ಜೊತೆ ಮಾತಿಗಿಳಿದ ಶಾಸಕ  ಗಣೇಶ, ರಾಜಕಾರಣಿಯಾದವರು ಒಮ್ಮೆ ಯಾದ್ರೂ ಸತ್ಯ ಹೇಳಬೇಕು.. ಕಳೆದ ಹತ್ತು ವರ್ಷದಿಂದ ಇದನ್ನೇ ಮಾಡ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಮೀಸಲಾತಿ ಕೊಡ್ತೇವೆ. ರಕ್ತದಲ್ಲಿ ಬರೆದುಕೊಡ್ತೇವೆ ಕೊನೆಗೆ ರಾಜೀನಾಮೆ ನೀಡ್ತೇನೆ ಎಂದ್ರು ಶ್ರೀರಾಮುಲು. ಮೀಸಲಾತಿ ಕೋಡ್ತೇವೆ ಎನ್ನೋ ಕಾರಣಕ್ಕೆ ವಾಲ್ಮೀಕಿ ‌ಜನಾಂಗ ಬಿಜೆಪಿಗೆ ಮತ ಹಾಕಿದೆ. ಬಿಜೆಪಿ 105 ಕ್ಷೇತ್ರದಲ್ಲಿ ಗೆಲ್ಲಲು ಪರೋಕ್ಷವಾಗಿ ವಾಲ್ಮೀಕಿ ಸ್ವಾಮೀಜಿ ಸಪೋರ್ಟ್ ಮಾಡಿದ್ದಾರೆ. ಆದ್ರೇ ಇವರು ಮಾಡ್ತಿರೋದೇನು ಎಂದು ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದರು.
ಸಮಾಜಕ್ಕೆ ಸುಳ್ಳು ಹೇಳಿ ಮತ ಪಡೆದ ಶ್ರೀರಾಮುಲು ಮತ್ತು ಬಿಜೆಪಿಗೆ ಜನ ಈ ಬಾರಿ  ತಕ್ಕ ಪಾಠ ಕಲಿಸುತ್ತಾರೆ. ಬಿಜೆಪಿಯಲ್ಲಿರುವ ಅನೇಕ ನಮ್ಮ ಸಮುದಾಯ ಒಳಗಿನಿಂದಲೇ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಇದರಿಂದ ಈ  ಬಾರಿ ನಾವು ಅಧಿಕಾರಕ್ಕೆ ಬರುವುದು ಖಚಿತ ಎಂದರು.