ಎಸ್ಸಿ-ಎಸ್ಟಿ ಮೀಸಲು ಹಣ ಬಳಕೆಗೆ ಪಂಚತಂತ್ರ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೧೪:ರಾಜ್ಯಾದ್ಯಂತ ಗ್ರಾಮ ಪಂಚಾಯ್ತಿಗಳಲ್ಲಿ ಪರಿಶಿಷ್ಟ ಜಾತಿ ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಹಣವನ್ನು ಸಮರ್ಪವಾಗಿ ಬಳಕೆ ಮಾಡಲು ಅನುಕೂಲವಾಗುವಂತೆ ಪಂಚತಂತ್ರ-೨ ತಂತ್ರಜ್ಞಾನವನ್ನು ಮುಂದಿನ ತಿಂಗಳಿನಿಂದ ಜಾರಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್‌ಖರ್ಗೆ ವಿಧಾನ ಪರಿಷತ್‌ನಲ್ಲಿಂದು ಹೇಳಿದ್ದಾರೆ.
ಈ ಪಂಚತಂತ್ರ-೨ ತಂತ್ರಜ್ಞಾನ ಅಳವಡಿಕೆ ಮಾಡುವುದರಿಂದ ಯಾವ ಪಂಚಾಯ್ತಿಯಲ್ಲಿ ಎಷ್ಟು ಹಣವಿದೆ. ಎಷ್ಟು ಹಣ ಖರ್ಚು ಮಾಡಿದ್ದಾರೆ. ಬಾಕಿ ಉಳಿದಿರುವ ಹಣ ಯಾಕೆ ಖರ್ಚು ಮಾಡಿಲ್ಲ ಎನ್ನುವ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿದ್ದು, ಇದರಿಂದ ಲೋಪ ಎದುರಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು.
ಡಾ. ತಿಮ್ಮಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಂಚಾಯ್ತಿಗಳಿಗೆ ಮೀಸಲಿಟ್ಟ ಹಣ ಲೋಪವಾಗದಂತೆ ಸಮರ್ಪಕವಾಗಿ ಖರ್ಚು ಮಾಡಲು ಸಹಕಾರಿಯಾಗಲಿದೆ ಎಂದು ಹೇಳಿದರು. ೨೦೨೨-೨೩ನೇ ಸಾಲಿನಲ್ಲಿ ರಾಜ್ಯಾದ್ಯಂತ ೭೧೬.೫೫ ಕೋಟಿ ಹಣವನ್ನು ಪರಿಶಿಷ್ಟ ಜಾತಿ ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿತ್ತು. ಆದರೆ, ೫೦೧ ಕೋಟಿ ರೂ. ಮಾತ್ರ ಖರ್ಚು ಮಾಡಿದ್ದಾರೆ. ಇನ್ನೂ ೨೧೭ ಕೋಟಿಗೂ ಹೆಚ್ಚು ಹಣ ಬಾಕಿ ಇದೆ ಎಂದು ಹೇಳಿದರು. ಕಳೆದ ಸರ್ಕಾರ ಈ ಹಣದ ಬಗ್ಗೆ ಸಮರ್ಪಕವಾಗಿ ಮೇಲ್ವಿಚಾರಣೆ ಮಾಡದ ಹಿನ್ನೆಲೆಯಲ್ಲಿ ಹಣ ಉಳಿದುಕೊಂಡಿದೆ. ಮುಂದಿನ ದಿನಗಳಲ್ಲಿ ಆ ರೀತಿ ಲೋಪವಾಗದಂತೆ ಪಂಚತಂತ್ರ-೨ ತಂತ್ರಜ್ಞಾನದ ಮೂಲಕ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.