
ಕಲಬುರಗಿ:ಆ.2:ಗ್ಯಾರಂಟಿ ಜಾರಿಗೆ ಹಣ ಹೊಂದಿಸುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಎಸ್ಸಿಪಿ, ಟಿಎಸ್ಪಿ ಹಣ ದುರ್ಬಳಕೆ ಮಾಡಿ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆಳಂದ ತಾಲೂಕಿನ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮುಖಂಡರಾದ ಆನಂದರಾವ ಗಾಯಕವಾಡ ಮತ್ತು ಸಂತೋಷ ಹಾದಿಮನಿ, ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಎಸ್ಸಿಪಿ, ಟಿಎಸ್‍ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಗೃಹ ಲಕ್ಷ್ಮೀ ಯೋಜನೆಗೆ 6 ಸಾವಿರ ಕೋಟಿ ರೂ. ಎಸ್‍ಸಿಪಿ ಟಿಎಸ್ಪಿ ಹಣ ಬಳಕೆ ಮಾಡಿಕೊಂಡಿದ್ದಾರೆ. ಗ್ಯಾರೆಂಟಿಗಳಿಗೆ 13000 ಕೋಟಿ ರೂ. ದಲಿತರ ಕೋಟಾದಿಂದ ವರ್ಗಾವಣೆ ಮಾಡಿದ್ದಾರೆ. ಕಾಂಗ್ರೆಸ್‍ನಲ್ಲಿರುವ ದಲಿತ ಶಾಸಕರು ಹಾಗೂ ಸಚಿವರು ಏನು ಮಾಡುತ್ತಿಧ್ದಿರಿ. ಅದನ್ನು ಕೇಳಲು ಧೈರ್ಯ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದೇ ಜುಲೈ ಅಧಿವೇಶನದಲ್ಲಿ ತಿದ್ದುಪಡಿಗೊಂಡ ಎಸ್ಸಿಪಿಟಿಎಸ್ಪಿ ಅಧಿನಿಯಮದ ಉಪಪ್ರಕರಣ ಡಿಯನ್ನು ರದ್ದು ಪಡಿಸಿರುವ ಮುಖ್ಯಮಂತ್ರಿಗಳು ಈಗ ಆ ಹಣವನ್ನು ಬೇರೆ ಕಡೆ ವರ್ಗಾಯಿಸಿ ತಾವೇ ಕಾನೂನಿನ ಉಲ್ಲಂಘನೆ ಮಾಡಿರುವುದು ಪ್ರಜಾಪ್ರಭುತ್ವ ಮತ್ತ ಸಂವಿಧಾನಕ್ಕೆ ನೀಡುವ ಗೌರವವೇ ಎಂದು ಪ್ರಶ್ನಿಸಿದ್ದಾರೆ.
ದಲಿತರ ಪರ ಎಂದು ಹೇಳುವ ಕಾಂಗ್ರೆಸ್ ನಾಯಕರು ದಲಿತರ ಮತ ಪಡೆದು ಅಧಿಕಾರಕ್ಕೆ ಬಂದು ಈಗ ದಲಿತರ ಹಕ್ಕುಗಳನ್ನು ಮೊಟಕುಗೊಳಿಸುವ ದಲಿತರನ್ನು ಅವಕಾಗಳಿಂದ ವಂಚಿಸುವ ಹುನ್ನಾರ ಮಾಡಲಾಗುತ್ತಿದೆ ಅಲ್ಲದೇ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುದೊಡ್ಡ ಬೆಲೆ ತೆರಬೇಕಾಗುವ ಸಂದರ್ಭ ಬರಬಹುದು ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಬಿಜೆಪಿ ಸರ್ಕಾರ ಅಂಬೇಡ್ಕರ್ ಅವರ ಹೆಸರಿನಲ್ಲಿ 100 ಹಾಸ್ಟೇಲ್ ನಿರ್ಮಾಣ ಮಾಡಲು ಘೋಷಣೆ ಮಾಡಿತ್ತು ಹಿಂದುಳಿದ ವರ್ಗದ ಹಾಸ್ಟೆಲ್ ಸಹ ನಿರ್ಮಾಣ ಮಾಡಲು ತೀರ್ಮಾನಿಸಿತ್ತು ಅವೆಲ್ಲವುಗಳನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ದಲಿತ ವರ್ಗಗಳ ಬಗ್ಗೆ ಕಾಳಜಿ ಇಲ್ಲ. ಕೇವಲ ಮಾತಿನಲ್ಲಿ ಮಾತ್ರ ಸಾಮಾಜಿಕ ನ್ಯಾಯ ಎಂದು ಹೇಳುತ್ತದೆ ಆದರೆ ವಾಸ್ತವದಲ್ಲಿ ಕಾಂಗ್ರೆಸ್ ಪಕ್ಷವು ದಲಿತರ ವಿರೋಧಿಗಳಿಗೆ. ದಲಿತ ಸಮುದಾಯದ ಮತಗಳನ್ನು ಪಡೆಯಲು ಮಾತ್ರ ಕಾಂಗ್ರೆಸ್ ಹವಣಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಷಯದ ಕುರಿತು ದಲಿತ ಸಚಿವರು, ಶಾಸಕರು ಧ್ವನಿ ಎತ್ತದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.