ಎಸ್‌ಸಿಪಿ-ಟಿಎಸ್‌ಪಿ ಯೋಜನೆಗೆ ೩೪ ಸಾವರಿ ಕೋಟಿ ರೂ.

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೩೧- ಈ ಸಾಲಿನಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗೆ ೩೪,೨೯೩.೬೯ ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿಂದು ನಡೆದ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿಯ ೩೪,೨೯೩.೬೯ ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.
ಇಂದಿನ ಸಭೆಯಲ್ಲಿ ಎಲ್ಲ ಇಲಾಖೆಗಳ ಕಾರ್ಯಕ್ರಮಗಳ ವಿವರವಾದ ಕರಡು ಕ್ರಿಯಾ ಯೋಜನೆಯ ಕುರಿತು ಚರ್ಚಿಸಿ ಅನುಮೋದನೆ ನೀಡಲಾಯಿತು.
ಅಧಿಕಾರಿಗಳ ವಿರುದ್ಧ ಕ್ರಮ
ಈ ಯೋಜನೆಯಡಿ ನಿಗದಿ ಮಾಡಿರುವ ಹಣವನ್ನು ಖರ್ಚು ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಯ್ದೆ ಹೇಳುತ್ತದೆ. ಕಾಯ್ದೆ ಗಂಭಿರವಾಗಿದೆ. ಹಾಗಾಗಿ ಯಾರೂ ನಿರ್ಲಕ್ಷ್ಯ ಮಾಡದೆ ಹಣವನ್ನು ಖರ್ಚು ಮಾಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಭೆಯಲ್ಲಿ ನೀಡಲಾಗಿದೆ.
ಪ್ರತಿ ಇಲಾಖೆಯ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳ ಅನುಷ್ಠಾನದ ನಂತರ ಪರಿಣಾಮದ ಮೌಲ್ಯಮಾಪನದ ವರದಿಯನ್ನು ಸಿದ್ದಪಡಿಸಿ ಫಲಾನುಭವಿಗಳ ಸ್ಥಿತಿಗತಿಯಲ್ಲಿ ಆಗಿರುವ ಬದಲಾವಣೆ ಕುರಿತು ಮಾಹಿತಿ ತರಿಸಬೇಕು ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ಸರ್ಕಾರದ ಹಿಂದಿನ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಯೋಜನಾ ಉಸ್ತುವಾರಿ ಕೋಶದ ರಚನೆ ಪ್ರಸ್ತಾಪ ಮಾಡಲಾಗಿತ್ತು ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ನಿರ್ವಹಣೆ ರೇಣುಕಚಿದಂಬರಂ ಅಧ್ಯಕ್ಷತೆಯ ಸಮಿತಿ ಸಲ್ಲಿಸಿರುವ ವರದಿಯನ್ನು ಅನುಷ್ಠಾನಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ, ಪಂಗಡಗಳ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿದಂತೆ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದಲ್ಲದೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಕಾಯ್ದೆ-೨೦೧೩ರ ಸೆಕ್ಷನ್ ೭(ಡಿ)ಯನ್ನು ಕೈ ಬಿಡುವುದಾಗಿ ಘೋಷಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ.ಈ ಸಭೆಯಲ್ಲಿ ರಾಜ್ಯ ಅಭಿವೃದ್ಧಿ ಪರಿಷತ್ ಉಪಾಧ್ಯಕ್ಷ ಹಾಗೂ ಸಚಿವ ಡಾ. ಹೆಚ್.ಸಿ ಮಹೇದವಪ್ಪ, ಸದಸ್ಯರುಗಳು ಹಾಗೂ ಸಚಿವರುಗಳಾದ ಪಿ. ನಾಗೇಂದ್ರ, ಹೆಚ್.ಕೆ. ಪಾಟೀಲ್, ಪ್ರಿಯಾಂಕ ಖರ್ಗೆ, ಎಂ.ಪಿ. ಸುಧಾಕರ್, ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ, ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ಪ್ರಸಾದ್ ಅಬ್ಬಯ್ಯ, ತುಕಾರಾಮ್, ಪ್ರಕಾಶ್ ರಾಥೋಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರುಗಳು ಪಾಲ್ಗೊಂಡಿದ್ದರು.