ಎಸ್‍ಬಿ.ಆರ್‍ನಲ್ಲಿ ದೊಡ್ಡಪ್ಪ ಅಪ್ಪ ಪುಣ್ಯಸ್ಮರಣೋತ್ಸವ;ಶಿಕ್ಷಕರ ದಿನಾಚರಣೆ

ಕಲಬುರಗಿ ಸೆ 6: ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪಕರಾದ ಪೂಜ್ಯ ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರ 39ನೇಪುಣ್ಯಸ್ಮರಣೋತ್ಸವವನ್ನು ಹಾಗೂ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಎಲ್ಲ ಅತಿಥಿ ಗಣ್ಯರು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪಕರಾದ ಪರಮಪೂಜ್ಯ ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರ ಭಾವಚಿತ್ರಕ್ಕೆ ಪೂಜೆ ಹಾಗೂ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಮಾತೋಶ್ರೀ ಗೋದುತಾಯಿ ಮಹಿಳಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ನಿಂಗಮ್ಮ ಪತಂಗೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಸರಳತೆಯಿಂದ ಬದುಕಿ ಇತರರಿಗೂ ಸರಳತೆಯನ್ನು ಬೋಧಿಸಿ ಸಾಧಕರಾದವರು. ಬಸವಾದಿ ಶರಣರ ಪರಂಪರೆಯ ಛಾಯೆಯಲ್ಲಿ ಕಾಯಕವನ್ನು ಶೃದ್ಧೆಯಿಂದ ಮಾಡುತ್ತಾ ಬಂದ ದೊಡ್ಡಪ್ಪ ಅಪ್ಪ ಅವರ ಬದುಕು ಪ್ರಸ್ತುತ ಪೀಳಿಗೆಯವರಿಗೆ ಆದರ್ಶವಾಗುವಂತಹುದು. ಕೃಷಿ ಕಾಯಕ ಜೀವಿಯಾಗಿ ಬಡವರ ದಾಸ್ಯದ ಕತ್ತಲೆ ಕಳೆಯಲು ಶಿಕ್ಷಣದ ದೀಪ ಹಚ್ಚಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ ಅವರು ಸಮಯಕ್ಕೆ ಬಹಳಷ್ಟು ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು ಎಂದು ಹೇಳಿದರು.
ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಕಾಂತ ಪಾಟೀಲ ಅವರು ತಮ್ಮ ಅಧ್ಯಕ್ಷಿಯ ಮಾತುಗಳನ್ನಾಡುತ್ತಾ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಅರ್ಚನ, ಅರ್ಪಣ, ತ್ರಿಕಾಲ ಪೂಜೆಗೈದು ಸಂಸ್ಥಾನ ಬೆಳೆಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಸ್ಥಾಪಿಸುವ ಮೂಲಕ ಶಿಕ್ಷಣಕ್ಕೆ ಅದರಲ್ಲೂ ಧಾರ್ಮಿಕ ಮತ್ತು ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಲ್ಲದೆ ಕನ್ನಡಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಒಕ್ಕಲುತನ ಮತ್ತು ಶಿಕ್ಷಣಕ್ಕೆ ದೊಡ್ಡಪ್ಪ ಅಪ್ಪ ಅವರು ಸಾಲ ಮಾಡಿ ದಾಸೋಹಗೈಯ್ಯುವ ಮೂಲಕ ದಾಸೋಹಕ್ಕೆ ಹೊಸ ವ್ಯಾಖ್ಯಾನವನ್ನೇ ಬರೆದರು. ಅವರು ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದಿದೆ. ವಿಶ್ವವಿದ್ಯಾಲಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಕೋರ್ಸ್‍ಗಳು ಆರಂಭವಾಗಿವೆ ಎಂದರು.
ಶಿಕ್ಷಕರ ದಿನಾಚರಣೆಯನ್ನು ಕುರಿತು ಶರಣಬಸವೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೋ ಎಸ್ ಬಿ ಪತಂಗೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಗುರುವಿನ ಮಹತ್ವವನ್ನು ಕುರಿತು ಮಾತನಾಡುತ್ತಾ ಸುಂದರ ಸಮಾಜವನ್ನು ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದುದು. ಏಕೆಂದರೆ ಶಿಕ್ಷಕ ಸಮಾಜದಲ್ಲಿ ಏನು ಬಿತ್ತುತ್ತಾನೋ ಅದೇ ಬೆಳೆಯುತ್ತದೆ ಹಾಗಾಗಿ ಶಿಕ್ಷಕ ರಾಷ್ಟ್ರ ನಿರ್ಮಾಣದ ರೈತ. ಈ ನಿಟ್ಟಿನಲ್ಲಿ ಎಸ್.ಬಿ.ಆರ್ ಕಾಲೇಜಿನ ಶಿಕ್ಷಕವೃಂದ ಕಾರ್ಯನಿರ್ವಹಿಸುತ್ತಿರುವುದರಿಂದ ಎಸ್.ಬಿ.ಆರ್ ಕಾಲೇಜಿನ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದೇ ಇದಕ್ಕೆ ಉದಾಹರಣೆ ಎಂದು ಹೇಳಿದರು.ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮೇಲ್ವಿಚಾರಕರಾದ ಡಾ. ಶ್ರೀಶೈಲ ಹೊಗಾಡೆ ಅವರು ಮಾತನಾಡಿ, ಜಗತ್ತಿನ ಅನೇಕ ಕ್ರಾಂತಿಗಳಿಗೆ, ರಾಜ್ಯ ಸ್ಥಾಪನೆಗೆ ಮತ್ತು ಪ್ರತಿಯೊಂದು ಸಾಧನೆಗಳ ಹಿಂದೆ ಗುರುಗಳ ಪಾತ್ರ ಬಹಳಷ್ಟು ಮಹತ್ವ ವಹಿಸಿದೆ ಎಂದು ಹೇಳಿದರು.ಕಾಲೇಜಿನ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳಾಗಿ ಕಾಲೇಜಿನ ಪ್ರಾರ್ಥನೆಯ ಸಂಪ್ರದಾಯದಂತೆ ಸಂಸ್ಕøತ, ಕನ್ನಡ, ಹಿಂದಿ, ಇಂಗ್ಲಿಷ್‍ನÀಲ್ಲಿ ಶ್ಲೋಕಗಳನ್ನು ಹೇಳುವುದರ ಮೂಲಕ ಪ್ರಾರ್ಥನೆಯನ್ನು ಮಾಡಿದರು. ವಿದ್ಯಾರ್ಥಿಗಳು ಒಂದು ದಿನದ ಶಿಕ್ಷಕರಾಗಿ ಪಾಠ ಮಾಡಿದರು. ಉತ್ತಮ ಶಿಕ್ಷಕರಿಗೆ ಬಹುಮಾನ ನೀಡಲಾಯಿತು. ಹಾಗೆಯೆ ವಿದ್ಯಾರ್ಥಿಗಳಿಗಾಗಿ ಪೂಜ್ಯ ದೊಡ್ಡಪ್ಪ ಅಪ್ಪಾ ಅವರ ದಾಸೋಹ ಜೀವನದ ಕುರಿತು ಭಾಷಣ, ಪ್ರಬಂಧ, ಚಿತ್ರಕಲೆ ಮತ್ತು ಗಾಯನಸ್ಪರ್ಧೆಗಳನ್ನು ಹಮ್ಮಿಕೊಂಡು ಬಹುಮಾನಗಳನ್ನು ವಿತರಿಸಲಾಯಿತು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪಕರಾದ ಪೂಜ್ಯ ಲಿಂಗೈಕ್ಯ ದೊಡ್ಡಪ್ಪಾ ಅಪ್ಪಾ ಅವರ ಪುಣ್ಯಸ್ಮರಣೋತ್ಸವದ ನಿಮಿತ್ಯವಾಗಿ ಮಧ್ಯಾಹ್ನ 3.00 ಗಂಟೆಯಿಂದ 5.30 ರವರೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿರುವ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿ ವರ್ಗದವರ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು, ಈ ಪಥಸಂಚಲನವು ಎಸ್.ಬಿ. ಕಾಲೇಜು ಆವರಣ, ಆನಂದ ಹೊಟೇಲ್, ಗೋವಾ ಹೊಟೇಲ್ ಮಾರ್ಗವಾಗಿ ದೇವಸ್ಥಾನದ ಆವರಣ ತಲುಪಿತು. ಇದರಲ್ಲಿ ಸುಮಾರು 8 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡರು.ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿ ವರ್ಗದವರೂ ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.