ಎಸ್‌ಬಿಐಗೆ ಸುಪ್ರೀಂ ಮತ್ತೆ ಚಾಟಿ

ನವದೆಹಲಿ,ಮಾ,೧೮- ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದ ವ್ಯಕ್ತಿಗಳು ಮತ್ತು ಕಂಪನಿಗಳ ಅಪೂರ್ಣ ಮಾಹಿತಿ ನೀಡಿದ ಭಾರತೀಯ ಸ್ಟೇಟ್ ಬ್ಯಾಂಕ್ ಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರಿಂಕೋರ್ಟ್, ಗುರುವಾರ ಸಂಜೆ ೫ ಗಂಟೆ ಒಳಗೆ ಸಂಪೂರ್ಣ ಮಾಹಿತಿ ನೀಡುವಂತೆ ಕಟ್ಟಪ್ಪಣೆ ಹೊರಡಿಸಿದೆ.
ಈ ಸಂಬಂಧ ಯಾವುದೇ ಮಾಹಿತಿ ಮುಚ್ಚಿಟ್ಟಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು. ಮಾಹಿತಿ ಮುಚ್ಚಿಟ್ಟು ಮತ್ತೆ ಅಪೂರ್ಣ ಮಾಹಿತಿ ನೀಡಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯೊಂದಿಗೆ ಎಸ್‌ಬಿಐ ಅಧ್ಯಕ್ಷರಿಗೆ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾದೀಶರ ಸಾಂವಿಧಾನಿಕ ಪೀಠ ಕಟ್ಟುನಿಟ್ಟಿನ ಸೂಚನೆ ನೀಡಿದೆ.ಚುನಾವಣಾ ಬಾಂಡ್‌ನ ಸಂಪೂರ್ಣ ವಿವರಗಳು, ಖರೀದಿ ದಾರರು, ಯಾವ ಪಕ್ಷಕ್ಕೆ ಎಷ್ಟು ಮೊತ್ತದ ಬಾಂಡ್ ಖರೀದಿ ಮಾಡಿದ್ದಾರೆ ಎನ್ನುವುದೂ ಸೇರಿದಂತೆ ಸಮಗ್ರ ವಿವರ ನೀಡಬೇಕು .ಪ್ರತಿ ಬಾಂಡ್‌ನ “ಕ್ರಮ ಸಂಖ್ಯೆ” ಅನ್ನು ಒಳಗೊಂಡಿರಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಹೇಳಿದೆ.ಚುನಾವಣಾ ಬಾಂಡ್‌ಗಳ ಮೂಲಕ ನೀಡಿದ ದೇಣಿಗೆಗಳ ಕುರಿತು ಎಸ್‌ಬಿಐ ಒದಗಿಸಿದ “ಅಪೂರ್ಣ ಡೇಟಾ” ವಿರುದ್ಧದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್, “ನಿಮ್ಮ ಬಳಿಯಿರುವ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಬೇಕೆಂದು ಎಂದು ಆದೇಶ ಹೊರಡಿಸಿದೆಗುರುವಾರ ಸಂಜೆ ೫ ಗಂಟೆಯೊಳಗೆ ಅಫಿಡವಿಟ್ ಸಲ್ಲಿಸುವಂತೆ ಎಸ್‌ಬಿಐ ಅಧ್ಯಕ್ಷರಿಗೆ ಸೂಚಿಸಿದ ಕೋರ್ಟ್, ಯಾವುದೇ ವಿವರಗಳನ್ನು ಮುಚ್ಚಿಟ್ಟಿಲ್ಲ ಎನ್ನುವ ಪ್ರಮಾಣ ಪತ್ರ ಪಡೆದ ನಂತರ ಅದನ್ನು ಅಪ್‌ಲೋಡ್ ಮಾಡಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
ಸುಪ್ರಿಂಕೋರ್ಟ್ ಕಳೆದ ತಿಂಗಳು ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿತ್ತು ಮತ್ತು ಕಳೆದ ಐದು ವರ್ಷಗಳಲ್ಲಿ ಮಾಡಿದ ದೇಣಿಗೆಗಳ ಎಲ್ಲಾ ವಿವರಗಳನ್ನು ಹಂಚಿಕೊಳ್ಳಲು ಬ್ಯಾಂಕ್‌ಗೆ ನಿರ್ದೇಶನ ನೀಡಿತು. ಚುನಾವಣಾ ಬಾಂಡ್‌ಗಳಲ್ಲಿ ಒದಗಿಸಲಾದ ಡೇಟಾ ಅಪೂರ್ಣವಾಗಿದೆ ಎಂದು ಅದು ಎಸ್‌ಬಿಐಗೆ ನೋಟಿಸ್ ಕಳುಹಿಸಿದೆ.
ಅಪೂರ್ಣ ಮಾಹಿತಿ ನೀಡುತ್ತಿರುವ “ಎಸ್‌ಬಿಐ ಧೋರಣೆ’ಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಚುನಾವಣಾ ಬಾಂಡ್ ಬಹಿರಂಗಪಡಿಸಲು ನ್ಯಾಯಯುತ ಬದ್ಧತೆ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.ಎಸ್‌ಬಿಐ ಅನ್ನು ಪ್ರತಿನಿಧಿಸುವ ವಕೀಲ ಹರೀಶ್ ಸಾಳ್ವೆ, ಪ್ರತಿ ಚುನಾವಣಾ ಬಾಂಡ್‌ನಲ್ಲಿ ಉಲ್ಲೇಖಿಸಲಾದ ವಿಶಿಷ್ಟವಾದ ಅಂಕಿಅಂಶವು ಯುವಿ ಬೆಳಕಿನ ಅಡಿಯಲ್ಲಿ ಮಾತ್ರ ಓದಬಹುದು, ಇದು ಕೇವಲ ಭದ್ರತಾ ವೈಶಿಷ್ಟ್ಯವಾಗಿದೆ ಮತ್ತು ಆಡಿಟ್ ಟ್ರಯಲ್‌ನಿಂದ ಪ್ರತ್ಯೇಕವಾಗಿದೆ ಎಂದಿದ್ದಾರೆ.
ಎಸ್‌ಬಿಐ ಒದಗಿಸಿದ ಡೇಟಾ ದಾನಿಗಳನ್ನು ಅವರ ಸ್ವೀಕರಿಸುವವರೊಂದಿಗೆ ಏಕೆ ಲಿಂಕ್ ಮಾಡಿಲ್ಲ ಎಂಬುದನ್ನು ಸಮರ್ಥಿಸಿದ ಅವರು, ಬ್ಯಾಂಕ್ ಅನಾಮಧೇಯತೆಯ ಆದೇಶದ ಅಡಿಯಲ್ಲಿ ಚುನಾವಣಾ ಬಾಂಡ್‌ಗಳ ಖರೀದಿ ಮತ್ತು ವಿಮೋಚನೆ ಡೇಟಾವನ್ನು ಎರಡು ಪ್ರತ್ಯೇಕ ಫೈಲ್‌ಗಳಲ್ಲಿ ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.

ಸಂವಿಧಾನದ ಪ್ರಕಾರ ಕೆಲಸ: ಸಿಜೆಐ
“ನ್ಯಾಯಾಧೀಶರಾಗಿ, ಕೇವಲ ಕಾನೂನಿನ ನಿಯಮದಲ್ಲಿದ್ದೇವೆ ಮತ್ತು ಸಂವಿಧಾನದ ಪ್ರಕಾರ ಕೆಲಸ ಮಾಡುತ್ತೇವೆ ಎಂದು ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.
ದೇಶದ ಕಾನೂನು ಕಾಪಾಡುವುದು ಮತ್ತು ಎತ್ತಿ ಹಿಡಿಯುವುದು ನಮ್ಮ ಉದ್ದೇಶ. ಕಾನೂನಿನ ಆಡಳಿತಕ್ಕಾಗಿ ಉತ್ತಮ ಕೆಲಸ ಮಾಡುವ ಕಡೆಗೆ ಗಮನ ಹರಿಸಿದ್ದೇವೆ ಎಂದಿದ್ದಾರೆ.

ಕಟ್ಟುನಿಟ್ಟಿನ ನಿರ್ದೇಶನ
ಚುನಾವಣಾ ಬಾಂಡ್ ಸಂಖ್ಯೆಗಳನ್ನು ಬಹಿರಂಗಪಡಿಸಲು ಎಸ್‌ಬಿಐಗೆ ಸೂಚಿಸಿರುವ ಸುಪ್ರೀಂ ಕೋರ್ಟ್ ,ಯಾವುದೇ ಮಾಹಿತಿಯನ್ನು ಬಚ್ಚಿಟ್ಟಿಲ್ಲ ಎಂದು ಅಫಿಡವಿಟ್ ಸಲ್ಲಿಸಿ ಎಂದು ನಿರ್ದೇಶಣ ನೀಡಿದೆ.
ಎಸ್‌ಬಿಐ ತನ್ನಲ್ಲಿರುವ ಪ್ರತಿಯೊಂದು ಮಾಹಿತಿಯನ್ನು ನೀಡುವುದಾಗಿ ಹೇಳುತ್ತದೆ ಮತ್ತು ಬ್ಯಾಂಕ್ ತನ್ನಲ್ಲಿರುವ ಯಾವುದೇ ಮಾಹಿತಿಯನ್ನು ಹಿಂತೆಗೆದುಕೊಳ್ಳುವುದಿಲ್ಲ.
ಎಸ್‌ಬಿಐ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಚುನಾವಣಾ ಬಾಂಡ್‌ಗಳ ಸಂಖ್ಯೆಯನ್ನು ನೀಡಬೇಕಾದರೆ ನಾವು ನೀಡುತ್ತೇವೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.