ಎಸ್ಪಿ ಕಛೇರಿಯಲ್ಲಿ ಏಕತಾ ದಿನ ಆಚರಣೆ

ಕೆಜಿಎಫ್.ನ೨:ಕೋಲಾರ ಚಿನ್ನದ ಗಣಿ ಪ್ರದೇಶದ ಚಾಂಫೀಯನ್‌ರೀಫ್ಸ್‌ನಲ್ಲಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸೋಮವಾರದಂದು ಬೆಳಿಗ್ಗೆ ಸರ್ದಾರ್ ವಲ್ಲಬಾಯಿ ಪಟೇಲ್ ರವರ ೧೪೭ನೇ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಏಕತಾ ದಿವಸವನ್ನಾಗಿ ಪ್ರತಿಜ್ಞಾವಿಧಿ ಸ್ವೀಕಾರದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪೊಲೀಸ್ ಅಧೀಕ್ಷಕರಾದ ಡಾ. ಕೆ.ಧರಣೀದೇವಿ ಮಾಲಗತ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನಾಚರಣೆಯ ಪ್ರತಿಜ್ಞಾ ವಿಧಿಯ ಸ್ವೀಕಾರ ಕಾರ್ಯಕ್ರಮದಲ್ಲಿ, ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಬೇದ ಭಾವವಿಲ್ಲದೇ ಭಾರತದ ಎಲ್ಲಾ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆಂದು ಪ್ರತಿಜ್ಞೆ ಮಾಡಿದರು.
ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣದ ಸ್ಪೂರ್ತಿಯನ್ನು ಕಾಪಾಡುತ್ತೇನೆಂದು, ಅಲ್ಲದೇ ವೈಯಕ್ತಿಕವಾಗಲೀ ಅಥವಾ ಸಾಮೂಹಿಕವಾಗಲೀ ನಮ್ಮಲ್ಲಿರುವ ಎಲ್ಲಾ ಬೇದ ಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇನೆಂದು ಸಹ ಪ್ರತಿಜ್ಞೆ ಮಾಡಲಾಯಿತು. ರಾಷ್ಟ್ರದ ಆಂತರಿಕ ಭದ್ರತೆಯನ್ನು ಖಾತ್ರಿ ಪಡಿಸಲು ನಾವೆಲ್ಲರೂ ನಮ್ಮದೇ ಆದ ಕೊಡುಗೆಯನ್ನು ನೀಡುತ್ತೇನೆಂದು ಒಮ್ಮನಸ್ಸಿನಿಂದ ಪ್ರತಿಜ್ಞೆ ಮಾಡಿದರು.
ಜಿಲ್ಲಾ ಪೊಲೀಸ್ ಕಛೇರಿಯ ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಶಾಖಾಧೀಕ್ಷಕರಾದ ಎಂ.ಮೂರ್ತಿ, ಎ.ನಾಜೀಮಾಬಾನು, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಕೃಷ್ಣಪ್ಪ, ನಾಗಪ್ಪ ಮಲ್ಲಪ್ಪ ಖಾನಾಪೂರ, ಪ್ರವೀಣ್, ಸೇರಿದಂತೆ ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.