ಕೋಲಾರ: ಜನತಾದರ್ಶನದ ಸಂದರ್ಭದಲ್ಲಿ ಕಾಂಗ್ರೆಸ್ ಏಜೆಂಟರಂತೆ ವರ್ತಿಸಿ ಸಂಸದರ ಮೇಲೆ ದೌರ್ಜನ್ಯ ನಡೆಸಿರುವ ಎಸ್ಪಿ ಎಂ.ನಾರಾಯಣರನ್ನು ಸಸ್ಪೆಂಡ್ ಮಾಡಬೇಕು, ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ದ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಆಗ್ರಹಿಸಿದರು.
ಜನತಾದರ್ಶನದ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿರೊಂದಿಗೆ ಅನುಚಿತವಾಗಿ ವರ್ತಿಸಿದ ಎಸ್ಪಿ ವರ್ತನೆ ಖಂಡಿಸಿ ಬಿಜೆಪಿಯಿಂದ ನಗರದ ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ ಪಕ್ಷದ ಕಾರ್ಯಕರ್ತರು ಎಸ್ಪಿ ನಾರಾಯಣ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ದ ಘೋಷಣೆ ಕೂಗಿದರು.
ಎಸ್ಪಿ ತಾವೊಬ್ಬ ಅಧಿಕಾರಿ ಎಂಬುದನ್ನೇ ಮರೆತಿದ್ದಾರೆ, ಇವರ ವರ್ತನೆ ವಿರುದ್ದ ಡಿಸಿಯವರೂ ತುಟಿ ಬಿಚ್ಚಲಿಲ್ಲ, ಸಚಿವರು ಬಾಯಿ ತೆರೆಯಲಿಲ್ಲ ಎಂದು ಕಿಡಿಕಾರಿದ ಅವರು, ಜನಪರವಾಗಿಕೆಲಸ ಮಾಡಬೇಕಾದ ಅಧಿಕಾರಿಗಳು ಒಂದು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸಿರುವುದು ಖಂಡನೀಯ ಎಂದರು.
ಜನತಾದರ್ಶನ ಸರ್ಕಾರದ ಶಿಷ್ಟಾಚಾರದಂತೆ ನಡೆಯಬೇಕಾಗಿತ್ತು. ಅರಣ್ಯ ಇಲಾಖೆ ಶ್ರೀನಿವಾಸಪುರದಲ್ಲಿ ನಡೆಸಿರುವ ರೈತರ ಮೇಲಿನ ದೌರ್ಜನ್ಯದ ಕುರಿತು ಮನವಿ ಸಲ್ಲಿಸಲು ಬಂದಿದ್ದ ಸಂಸದರ ಮೇಲೆ ಕಾಂಗ್ರೆಸ್ ಶಾಸಕರ ಅಣತಿಯಂತೆ ಎಸ್ಪಿ ಸಂಸದರನ್ನು ಎಳೆದಾಡಿ, ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಶ್ರೀನಿವಾಸಪುರದಲ್ಲಿ ಕಂದಾಯ ಇಲಾಖೆಯ ಅಧಿಕೃತ ಸಾಗುವಳಿ ಚೀಟಿ, ಪಹಣಿ, ಪಟ್ಟಾ, ಮ್ಯುಟೇಷನ್ ಹೊಂದಿ ೬೦ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರ ಮೇಲೆ ದೌರ್ಜನ್ಯ ಎಸಗಲಾಗಿದೆ, ಮಾವು, ತೆಂಗಿನ ಮರಗಳನ್ನು ಕತ್ತರಿಸಲಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್‌ನ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತಿತರ ದೊಡ್ಡದೊಡ್ಡ ನಾಯಕರು ನೂರಾರು ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದರೂ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಮತ್ತು ಸರ್ಕಾರ ಸಾಗುವಳಿ ಚೀಟಿ, ದಾಖಲೆ ಹೊಂದಿರುವ ಸಾಮಾನ್ಯ ರೈತರ ಮೇಲೆ ದೌರ್ಜನ್ಯ ನಡೆಸಿದೆ, ಭಯೋತ್ಪಾದಕರಂತೆ ಬಿಂಬಿಸಿದೆ ಎಂದು ಕಿಡಿಕಾರಿದರು.
ಬಂಗಾರಪೇಟೆಯಲ್ಲಿ ತಮ್ಮ ತಾಯಿಯ ಹೆಸರಿಗೆ ೪ ಎಕರೆ ಜಮೀನು ಯಾರು ಮಂಜೂರು ಮಾಡಿಸಿಕೊಂಡಿದ್ದಾರೆ ಎಂಬುದು ಗೊತ್ತಿದೆ, ಕೆರೆ,ಗೋಮಾಳ ಎಷ್ಟು ಒತ್ತುವರಿಯಾಗಿದೆ ಎಂಬ ಸತ್ಯವೂ ಗೊತ್ತಿದ್ದು, ಅಂತಹ ಭೂಗಳ್ಳರನ್ನು ಬಂಧಿಸದೇ, ಸಾಮಾನ್ಯ ರೈತರ ಜಮೀನು ವಶಕ್ಕೆ ಮುಂದಾಗಿರುವ ರೈತ,ದಲಿತ ವಿರೋಧ ಕಾಂಗ್ರೆಸ್ ಸರ್ಕಾರದ ವರ್ತನೆ ಖಂಡನೀಯ ಎಂದರು.
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಎಸ್ಪಿ ನಾರಾಯಣ ರೈತರ ಪರವಾಗಿ ಮನವಿ ಸಲ್ಲಿಸಲು ಬಂದಿದ್ದ ಸಂಸದರ ಮೇಲೆ ದೌರ್ಜನ್ಯ ಎಸಗಿದ್ದಾರೆ ಅವರನ್ನು ತಕ್ಷಣ ಅಮಾನತ್ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಕೆಯುಡಿಎ ಮಾಜಿ ಅಧ್ಯಕ್ಷರಾದ ಓಂಶಕ್ತಿ ಚಲಪತಿ, ವಿಜಯಕುಮಾರ್, ನಗರಸಭಾ ಸದಸ್ಯ ಪ್ರವೀಣ್‌ಗೌಡ, ಯುವಮೋರ್ಚಾ ಬಾಲಾಜಿ, ವಕೀಲ ಮಾಗೇರಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ಎಸ್ಟಿ ಮೋರ್ಚಾದ ಹನುಮಂತಪ್ಪ, ತಿಮ್ಮರಾಯಪ್ಪ, ಗಾಂಧಿನಗರ ವೆಂಕಟೇಶ್, ಹೂವಳ್ಳಿ ನಾಗರಾಜ್, ಮಂಜುನಾಥ್, ಸುರೇಶ್ ಇದ್ದರು.