ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.23; ಬಹುಭಾಷಾ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ತಮ್ಮ ಜೀವಿತಾವಧಿಯಲ್ಲಿ ಕನ್ನಡ ಭಾಷೆಯಲ್ಲಿ ಹಾಡಿದ ಕೊನೆಯ ಹಾಡು ಹಾಡಿರುವ `ಶ್ರೀಮಂತ’ ಕನ್ನಡ ಚಲನಚಿತ್ರ ಎಪ್ರಿಲ್ 14 ರಂದು ರಾಜ್ಯಾದ್ಯಂತ 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರತಂಡದ ಶಿವರಾಜ್ ದಳವಾಯಿ ಹೇಳಿದರು.
ಅವರು ನಗರದ ಮರ್ಚೆಡ್ ಸಭಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ಶ್ರೀಮಂತ ಎಂದರೆ ಹಣವಂತರಲ್ಲ. ಯಾರ ಬಳಿಯೂ ತಲೆಬಾಗದೆ, ಕೈ ಚಾಚದೆ ಸ್ವಾಭಿಮಾನದಿಂದ ಜೀವಿಸುವ `ರೈತ’ ನಿಜವಾದ `ಶ್ರೀಮಂತ’. ರೈತರ ದೈನಂದಿನ ಬದುಕು, ಬವಣೆಯೇ ಈ ಚಿತ್ರದ ಕಥಾಹಂದರವಾಗಿದ್ದು, ಹೃದಯ ಶ್ರೀಮಂತಿಕೆಯುಳ್ಳರೈತನೇ ಜಗತ್ತಿನ ಅತಿದೊಡ್ಡ ಶ್ರೀಮಂತ ಎಂಬ ಸಂದೇಶವನ್ನು ಸಾರಲಿದೆ ಎಂದು ವಿವರಿಸಿದರು.
ಗೋಲ್ಡನ್ ರೈನ್ ಸಂಸ್ಥೆಯಡಿ, ನಿರ್ಮಾಪಕ ಹಾಸನ್ ರಮೇಶ್ ಅವರ ನಿರ್ದೇಶನದಲ್ಲಿ ಚಿತ್ರ ಸಿದ್ದವಾಗಿದೆ.
ಗ್ರಾಮೀಣ ಸೊಗಡನ್ನು ಬಿಂಬಿಸುವ ಸದ್ಯ ಮರೆಯಾಗುತ್ತಿರುವ ಹಳ್ಳಿಯ ಸುಗ್ಗಿ, ಜಾತ್ರೆ, ಹಬ್ಬ, ಹಾಡು, ಹಸೆ, ಹಳ್ಳಿಯ ಆಟಗಳು, ಗ್ರಾಮೀಣ ಕಲೆಗಳ ಸಂಭ್ರಮವನ್ನು ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಇದರೊಂದಿಗೆ ಕರ್ನಾಟಕದ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಭ್ರಮಗಳನ್ನು ತಿಳಿಹಾಸ್ಯದ ಮೂಲಕ ಚಿತ್ರವೀಕ್ಷಿಸುವ ಪ್ರೇಕ್ಷಕರನ್ನು ರಂಜಿಸಲಿದೆಂದರು. ಬಹುಭಾಷಾ ನಟ `ಸೋನು ಸೂದ್’ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ರೈತನ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈ ಮೂಲದ ವೈಷ್ಣವಿ ಪಟವರ್ಧನ್, ಹಾಸನದ ವೈಷ್ಣವಿ ಚಂದ್ರನ್ ಮೆನನ್ ನಾಯಕಿಯರಾಗಿ ಮತ್ತು ಕಲ್ಬುರ್ಗಿಯ ಕ್ರಾಂತಿ ಎನ್ನುವ ಯುವಪ್ರತಿಭೆ ಯುವಕೃಷಿಕನ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಕನ್ನಡ ಚಿತ್ರರಂಗದ ಖ್ಯಾತ ನಟರಾದ ರಮೇಶ್ ಭಟ್, ರವಿಶಂಕರಗೌಡ, ಖ್ಯಾತ ಹಾಸ್ಯಕಲಾವಿದ ಸಾಧು ಕೋಕಿಲ, ಚರಣ್‍ರಾಜ್, ಕಲ್ಯಾಣಿ, ಗಿರಿ, ರಾಜು ತಾಳಿಕೋಟೆ, ಕುರಿಬಾಂಡ್ ರಂಗ, ಬ್ಯಾಂಕ್ ಮಂಜಣ್ಣ, ಬಸವರಾಜು ಹಾಸನ್ ಸೇರಿ ಹಲವಾರು ಗ್ರಾಮೀಣ ಭಾಗದ ರಂಗಭೂಮಿ ಕಲಾವಿದರು ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.
ಇದೊಂದು ಸಾಮುದಾಯಕ ಚಿತ್ರವಾಗಿದ್ದು, ಚಿತ್ರದ ಬಹುತೇಕ ಚಿತ್ರೀಕರಣವನ್ನು ನೈಜ ಲೊಕೇಷನ್‍ಗಳಲ್ಲಿ ಚಿತ್ರೀಕರಿಸಲಾಗಿದೆಂದರು.
ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿನ ಹಾಡೊಂದನ್ನು ಬಹುಭಾಷಾ ಹಿನ್ನೆಲೆಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿರುವುದು ಖುಷಿ ನೀಡಿದರೆ, ಇದೀಗ ನಮ್ಮೊಂದಿಗೆ ಇಲ್ಲದಎಸ್.ಪಿ.ಬಾಲು ಅವರಿಗೆ ನಮ್ಮ ಚಿತ್ರದಲ್ಲೇ ಕೊನೆಯ ಹಾಡು ಹಾಡಿರುವುದಕ್ಕೆ ಬೇಸರವಾಗಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಈಗಾಗಲೇ ಒಂದನ್ನು ಬಿಡುಗಡೆ ಮಾಡಲಾಗಿದೆ. ಖ್ಯಾತ ಗಾಯಕ ವಿಜಯಪ್ರಕಾಶ್ ಗಾಯನದ ಗುಹೇಶ್ವರ ಎಂಬ ಎರಡನೇ ಹಾಡನ್ನು ಈಚೆಗೆ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಹಂಸಲೇಖ ಅವರೇ ಬಿಡುಗಡೆಗೊಳಿಸಿದ್ದಾರೆ. ಚಿತ್ರವನ್ನು ಕಳೆದ ನಾಲ್ಕು ವರ್ಷಗಳಿಂದ ಚಿತ್ರೀಕರಣ ಮಾಡಿದ್ದು, ವೆಚ್ಚಕ್ಕೆ ತಕ್ಕಂತೆ ಅದ್ಧೂರಿತನವೂ ಚಿತ್ರದಲ್ಲಿ ಕಾಣಬಹುದು. 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ದತೆ ನಡೆದಿದೆಂದರು.
ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಮಂಜಣ್ಣ, ಮಹೇಶ್, ನಾಯಕ ಕ್ರಾಂತಿ, ಕಟ್ಟೆಸ್ವಾಮಿ ಇದ್ದರು.