ಎಸ್‌ಡಿಎಂ ಆಸ್ಪತ್ರೆಯಲ್ಲಿ ಫ್ರಾನ್ಸ್‌ ವಿದ್ಯಾರ್ಥಿಗಳಿಗೆ ಕಾರ್ಯಾಗಾರ 

ಉಡುಪಿ, ನ.೧೧- ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆ, ಅಹಿಂಸಾ ಫೌಂಡೇಶನ್, ಫ್ರಾನ್ಸ್‌ನ ವಿದ್ಯಾರ್ಥಿಗಳಿಗಾಗಿ 3 ವಾರಗಳ ಕಾರ್ಯಾಗಾರವನ್ನು ನವೆಂಬರ್ 25ರವರೆಗೆ ಆಯೋಜಿಸಿದೆ. 

ಕಾರ್ಯಾಗಾರವನ್ನು ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ರಾದ ಡಾ.ಮಮತಾ ಕೆ.ವಿ. ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್., ಕಾಯ ಚಿಕಿತ್ಸಾ ವಿಭಾಗ ಮುಖ್ಯಸ್ಥೆ ಡಾ.ಶ್ರೀಲತಾ ಕಾಮತ್, ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ವೀರಕುಮಾರ ಕೆ. ಉಪಸ್ಥಿತರಿದ್ದರು. ಈ ಕಾರ್ಯಾಗಾರದಲ್ಲಿ ಔಷಧ ದ್ರವ್ಯಗಳ ಸಂಗ್ರಹಣೆ, ನಿರ್ಮಾಣ, ಆರ್ಯುರ್ವೇದದ ಶಿಷ್ಟ ಚಿಕಿತ್ಸಾ ವಿಧಾನಗಳ ಪರಿಚಯ ಹಾಗೂ ಅವುಗಳ ಪ್ರಾತ್ಯಕ್ಷಿಕೆಯನ್ನು ವಿಶೇಷವಾಗಿ ಹೇಳಿ ಕೊಡಲಾಗುತ್ತಿದೆ. ಕಾರ್ಯಾಗಾರ ಸಮಿತಿಯ ಅಧ್ಯಕ್ಷೆ ಡಾ. ಶ್ರೀಲತಾ ಕಾಮತ್, ಕಾರ್ಯಾಗಾರ ದ ಸದುಪಯೋಗ ಪಡೆದು ಕೊಳ್ಳುವಂತೆ ಫ್ರಾನ್ಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಆಯುರ್ವೇದ ಶಾಸ್ತ್ರದ ಅಧ್ಯಯನಕ್ಕೆ ಆಸ್ಪತ್ರೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ತಿಳಿಸಿದರು. ವಿದ್ಯಾರ್ಥಿಗಳು ಆಯುರ್ವೇದದಲ್ಲಿರುವ ಆಸಕ್ತಿ ಹಾಗೂ ಪ್ರಾಯೋಗಿಕ ಜ್ಞಾನವನ್ನು ಉತ್ತಮಪಡಿಸುವ ಆಶಯ ವನ್ನು ವ್ಯಕ್ತಪಡಿಸಿದರು. ಡಾ.ಚೈತ್ರ ಸ್ವಾಗತಿಸಿ, ಡಾ.ಸರಿತಾ ಟಿ. ಕಾರ್ಯಕ್ರಮ ನಿರೂಪಿಸಿ ಡಾ.ಅರುಣ್ ಕುಮಾರ್ ವಂದಿಸಿದರು.