ಎಸ್ಟಿ ಹೋರಾಟ – ಭಾರೀ ಬೆಂಬಲ

ರಾಯಚೂರು.ಜ.೦೪- ಮೂಲತಃ ಪರಿಶಿಷ್ಟ ಪಂಗಡದಲ್ಲಿದ್ದ ಕುರುಬ ಸಮಾಜ ಸ್ವಾತಂತ್ರ್ಯ ನಂತರ ಬದಲಾದ ಪರಿಸ್ಥಿತಿಯಲ್ಲಿ ರಾಜಕೀಯ ಒತ್ತಡದ ಕೊರತೆಯಿಂದ ಸೌಲಭ್ಯ ವಂಚಿತಗೊಂಡಿದ್ದು, ಈಗ ಈ ಹೋರಾಟದ ಮೂಲಕ ಕುರುಬರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಲಾಗುತ್ತಿದೆಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.
ಅವರಿಂದು ಸಿಂಧನೂರಿನಲ್ಲಿ ಆಯೋಜಿಸಿದ ಕೊಪ್ಪಳ, ರಾಯಚೂರು, ಬಳ್ಳಾರಿ ಮೂರು ಜಿಲ್ಲೆಗಳ ಬೃಹತ್ ಕುರುಬ ಎಸ್ಟಿ ಹೋರಾಟ ಸಮಿತಿಯ ಸಮಾವೇಶದಲ್ಲಿ ಪಾಲ್ಗೊಳ್ಳುವ ಪೂರ್ವ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಆರ್.ಎಸ್.ಎಸ್. ಮತ್ತು ಕುರುಬ ಎಸ್ಟಿ ಹೋರಾಟಕ್ಕೆ ಯಾವುದೇ ಸಂಬಂಧವಿಲ್ಲ. ಇದು ರಾಜ್ಯದ ಕುರುಬ ಜನಾಂಗದ ಬಹುದಿನಗಳ ಬೇಡಿಕೆ ಮತ್ತು ಹೋರಾಟಗಳ ಮುಂದುವರೆದ ಹೋರಾಟವಾಗಿದೆ. ಈಗಾಗಲೇ ಕುರುಬರನ್ನು ಎಸ್ಟಿ ಪಟ್ಟಿಗೆ ಸೇರಿಸುವುದಕ್ಕೆ ಸಂಬಂಧಿಸಿ ಕೇಂದ್ರ ಸಚಿವರನ್ನು ಭೇಟಿಯಾಗಿ, ಚರ್ಚಿಸಿದ್ದೇವೆ.
ಕಾಗೀನೆಲೆ ಜಗದ್ಗುರುಗಳ ನೇತೃತ್ವದಲ್ಲಿ ವಿವಿಧ ಹಂತಗಳ
ಮಾವೇಶ ಮತ್ತು ಹೋರಾಟ ಕೈಗೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವತಃ ಜಗದ್ಗುರುಗಳು ಭೇಟಿಯಾಗಿ ಚರ್ಚಿಸಿದ ನಂತರ ಈ ಹೋರಾಟಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಶ್ರೀಗಳ ನೇತೃತ್ವದಲ್ಲಿ ಮಹಿಳಾ ಮತ್ತು ಸಮಾಜದ ಒಡೆಯರ್ ಮತ್ತು ವಿಭಾಗೀಯ ಮಟ್ಟದ ಸಮಾವೇಶಗಳು ಕೈಗೊಳ್ಳಲಾಗಿದೆ. ಜ.೬ ಕ್ಕೆ ದಾವಣಗೆರೆ, ೭ ಕ್ಕೆ ಶಿಕಾರಿಪುರದಲ್ಲಿ ಸಮಾವೇಶ ನಡೆಯಲಿವೆ. ಜ.೧೪ ರಂದು ಸಂಕ್ರಾಂತಿಯ ದಿನ ಜಗದ್ಗುರುಗಳ ನೇತೃತ್ವದಲ್ಲಿ ಬೆಂಗಳೂರಿಗೆ ಪಾದಯಾತ್ರೆ ನಡೆಯಲಿದೆ.
ಇಲ್ಲಿವರೆಗೂ ನಡೆದ ಸಮಾವೇಶಗಳಿಗೆ ನಿರೀಕ್ಷೆಗೂ ಮೀರಿ ಜನ ಆಗಮಿಸುತ್ತಿದ್ದಾರೆ. ಕುಲಶಾಸ್ತ್ರ ಅಧ್ಯಯನ ವರದಿ ಬಂದ ನಂತರ ಮುಂದಿನ ಪ್ರಕ್ರಿಯೆ ಮತ್ತಷ್ಟು ತೀವ್ರಗೊಳ್ಳಲಿವೆ. ಬಂಡೆಪ್ಪ ಕಾಶಂಪೂರು ಅವರು ಸಚಿವರಾಗಿದ್ದ ಅವಧಿಯಲ್ಲಿ ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶಿಸಲಾಗಿತ್ತು. ಈಗ ಈ ವರದಿಯ ನಿರೀಕ್ಷೆ ಮಾಡಲಾಗುತ್ತಿದೆಂದು ಹೇಳಿದ ಅವರು, ಇಡೀ ರಾಜ್ಯದಲ್ಲಿ ಹೋರಾಟಕ್ಕೆ ಉತ್ತಮ ಸ್ಪಂದನೆ ವ್ಯಕ್ತಗೊಂಡಿದೆ. ಕುರುಬರು ಎಸ್ಟಿ ಆಗುವ ಎಲ್ಲಾ ಅರ್ಹತೆ ಪಡೆದಿದ್ದಾರೆ. ಎಸ್ಟಿ ಹೋರಾಟಕ್ಕೆ ಯಾರ ವಿರೋಧವೂ ಇಲ್ಲ. ಸಮಾವೇಶಕ್ಕೆ ಬರುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದರು.