ಎಸ್‍ಟಿ ಸೇರ್ಪಡೆ ಸೇರಿ ಸಮಸ್ಯೆಗಳ ಪರಿಹಾರಕ್ಕೆ ಫೆ.14ರಂದು ಕಲ್ಯಾಣದ ಕೋಲಿ, ಕಬ್ಬಲಿಗ ಸಮಾಜದ ಸಭೆ

ಕಲಬುರಗಿ:ಫೆ.12: ಕೋಲಿ ಕಬ್ಬಲಿಗ ಸಮುದಾಯದ ಬಹು ದಿನಗಳ ಬೇಡಿಕೆಯಾದ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ನಡೆಯುತ್ತಿರುವ ಮಹತ್ವದ ಬೆಳವಣಿಗೆಗಳು ಮತ್ತು ಸಮಾಜದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಚರ್ಚಿಸಲು ಇದೇ ಫೆಬ್ರವರಿ 14ರಂದು ಬೆಳಿಗ್ಗೆ 10-30ಕ್ಕೆ ನಗರದ ಓಝಾ ಲೇಔಟ್‍ದಲ್ಲಿರುವ ಅಂಬಿಗರ ಚೌಡಯ್ಯ ಭವನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕೋಲಿ, ಕಬ್ಬಲಿಗ ಸಮಾಜದ ಸಭೆಯನ್ನು ಕರೆಯಲಾಗಿದೆ ಎಂದು ಜಿಲ್ಲಾ ಕೋಲಿ, ಕಬ್ಬಲಿಗ ಸಮನ್ವಯ ಸಮಿತಿಯ ನೇತಾರ ಅವ್ವಣ್ಣ ಎಸ್. ಮ್ಯಾಕೇರಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸಲು ಕಳೆದ 27 ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಇಲ್ಲಿಯವರೆಗೆ ಎಸ್‍ಟಿಗೆ ಸೇರದೇ ಇರುವುದ ನೋವಿನ ಸಂಗತಿ. ಆದಾಗ್ಯೂ, ಈಗ ಎಸ್‍ಟಿ ಕಡತ ವಿಲೇವಾರಿಗಾಗಿ ತಾಂತ್ರಿಕ ತಂಡವು ಹಲವಾರು ಸುತ್ತಿನ ಅಧ್ಯಯನ, ಸಂಶೋಧನೆ, ತಾಂತ್ರಿಕ ಸಮಸ್ಯೆಗಳು ಸಂಬಂಧಪಟ್ಟ ಇಲಾಖೆಗಳ ಜೊತೆ ಹಲವಾರು ಸುತ್ತಿನ ಸಭೆಗಳನ್ನು ಮಾಡಲಾಗಿದೆ. ಈ ಸಂಬಂಧವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆಗೆ ಸಮಾಲೋಚನೆ ನಡೆಸಿರುವುದರಿಂದ ಮಹತ್ವದ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.
ಎಲ್ಲ ಬೆಳವಣಿಗೆಗಳ ಕುರಿತು ಮಾಹಿತಿಯನ್ನು ಸಮಾಜದ ಜನರೊಂದಿಗೆ ಹಂಚಿಕೊಂಡು, ಅವರಿಂದ ಕೆಲವು ಸಲಹೆ ಮತ್ತು ಸೂಚನೆಗಳನ್ನು ಪಡೆದುಕೊಂಡು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಸಭೆಯನ್ನು ಕರೆಯಲಾಗಿದೆ. ಆದ್ದರಿಂದ ಸಭೆಗೆ ಸಮಾಜದ ಮುಖಂಡರು, ಜನಪ್ರತಿನಿಧಿಗಳು, ಯುವಕರು ಪಾಲ್ಗೊಳ್ಳಬೇಕು ಎಂದು ಅವರು ಕೋರಿದರು.
ಕಳೆದ ವರ್ಷ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 19 ಕೋಟಿ ರೂ.ಗಳನ್ನು ನೀಡಲಾಗಿದ್ದು, ಇದು ಅತ್ಯಂತ ಕಡಿಮೆ ಅನುದಾನವಾಗಿದೆ. ಈ ಬಾರಿಯ ಬಜೆಟ್‍ನಲ್ಲಿ ನಿಗಮಕ್ಕೆ 400 ಕೋಟಿ ರೂ.ಗಳ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದ ಅವರು, ಮೀನುಗಾರಿಕೆ ಕುಲ ಕಸುಬಾಗಿದೆ. ಹಾಗಾಗಿ ಸಮುದಾಯದ ಅಭಿವೃದ್ಧಿಗಾಗಿ ಹಾಗೂ ವೃತ್ತಿಗಾಗಿ ಬಜೆಟ್‍ನಲ್ಲಿ ನೂರು ಕೋಟಿ ರೂ.ಗಳನ್ನು ಮೀಸಲಿಡಬೇಕು ಎಂದು ಆಗ್ರಹಿಸಿದರು.
ಚಿತ್ತಾಪುರ ತಾಲ್ಲೂಕಿನ ಕಲಗುರ್ತಿ ಗ್ರಾಮದ ದೇವಾನಂದ್ ಕೊರಬಾ ಯುವಕನ ಪ್ರಕರಣಕ್ಕೆ ಸಂಬಂಧಿಸಿದಂತೆ 45 ದಿನಗಳ ಹೋರಾಟದ ನಂತರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಬೇಡಿಕೆಗಳನ್ನು ಈಡೇರಿಸುವುದಾಗಿ ಬರವಸೆ ನೀಡಿದ್ದರಿಂದ ಧರಣಿ ಕೈಬಿಡಲಾಗಿತ್ತು. ಆದಾಗ್ಯೂ, ನೌಕರಿ ಹೊರತುಪಡಿಸಿ ಉಳಿದ ನಮ್ಮ ಯಾವುದೇ ಬೇಡಿಕೆಗಳು ಈಡೇರಿಲ್ಲ. ಹೀಗಾಗ ಉಳಿದ ಬೇಡಿಕೆಗಳನ್ನ ಕೂಡಲೇ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಸ್ಥಳೀಯವಾಗಿ ಸಮಾಜದ ಯುವಕ, ಯುವತಿಯರ ಮೇಲೆ ನಡೆಯುತ್ತಿರುವ ಪ್ರಚೋದಿತ ಸರಣಿ ಆತ್ಮಹತ್ಯೆ, ಅತ್ಯಾಚಾರ, ಅಪಹರಣ ಮತ್ತು ಕೊಲೆ ಪ್ರಕರಣಗಳು ಸಾಕಷ್ಟು ನಡೆಯುತ್ತಿವೆ. ಈ ಕುರಿತು ಸಂಘಟನೆ ಹೋರಾಟ ಮಾಡುತ್ತ ಬಂದಿದೆ. ಅದರಲ್ಲಿ ಚಿಣಮಗೇರಾ ಬಾಲಕಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ನ್ಯಾಯ ಒದಗಿಸಲಾಗಿದೆ. ಚಿಂಚೋಳಿಯ ಶಿವಶರಣ್ ಜಮಾದಾರ್, ತಾಡತೆಗನೂರಿನ ಶರಣು ಜಮಾದಾರ್, ಕೋಡ್ಲಿಯ ಯುವಕ ಅಮರ್ ಅವರಿಗೆ ಕಾನೂನಿನಿಂದ ಅಲ್ಪ ಪ್ರಮಾಣದ ನ್ಯಾಯ ಸಿಕ್ಕಿದೆ ಎಂದು ಅವರು ಹೇಳಿದರು.
ಪಟ್ಟಣ್ ಗ್ರಾಮದ ದೇವಪ್ಪ ನಾಟೀಕಾರ್ ಅವರದು ಆತ್ಮಹತ್ಯೆಯಲ್ಲ. ಅದೊಂದು ಕೊಲೆಯಾಗಿದೆ. ಈ ಕುರಿತು ದೂರು ಸಲ್ಲಿಸಿದ್ದು, ಕೂಡಲೇ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಮದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂತೋಷ್ ತಳವಾರ್, ತಮ್ಮಣ್ಣ ಡಿಗ್ಗಿ, ಮಲ್ಲಿಕಾರ್ಜುನ್ ಎಮ್ಮೆನೋರ್, ಪ್ರೇಮ್ ಕೋಲಿ, ಸೂರ್ಯಕಾಂತ್ ಔರಾದ್, ದೇವಿಂದ್ರ ಚಿಗರಳ್ಳಿ, ದಶರಥ್ ದೊಡ್ಡಮನಿ, ರವಿ ಡೊಂಗರಗಾಂವ್, ನಾಗರಾಜ್ ನಂದೂರ್ ಮುಂತಾದವರು ಉಪಸ್ಥಿತರಿದ್ದರು.