ಎಸ್ಟಿ ಮೀಸಲಾತಿಯಲ್ಲಿ ಬೇರೆ ಸಮುದಾಯ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಕ್ಷೇಪ

ಸಿರವಾರ,ಜ.೧೯- ವಾಲ್ಮೀಕಿ ಸಮಾಜಕ್ಕೆ ಇತರೆ ಸಮುದಾಯದವರನ್ನು ಸೇರ್ಪಡೆಗೆ ಸಿರವಾರ ತಾಲೂಕ ವಾಲ್ಮೀಕಿ ಸಮಾಜದ ಆಕ್ಷೇಪ ಇದೇ, ಇದಕ್ಕೆ ವಾಲ್ಮೀಕಿ ಸಮಾಜದ ಶಾಸಕರು ಆಕ್ಷೇಪ ಮಾಡುವ ಮೂಲಕ ಸಮಾಜದ ಪರ ನಿಲ್ಲಬೇಕು ಎಂದು ಪ.ಪಂಚಾಯತಿ ಸದಸ್ಯ ಸೂರಿ ದುರುಗಣ್ಣ ನಾಯಕ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹೇಳಿಕೆ ಸಂವಿಧಾನ ಬಹಿರವಾಗಿದ್ದು, ಹೋದಲ್ಲಿ ಬಂದಲ್ಲಿ ಇತರ ಸಮುದಾಯಗಳ ಓಲೈಕೆಗಾಗಿ ಎಸ್.ಟಿ.ಮೀಸಲಾತಿಯಲ್ಲಿ ಸೇರಿಸುತ್ತೆನೆ ಎಂದು ಹೇಳುತ್ತಿರುವುದು ಸಾಂವಿಧಾನಿಕ ವಿರೋಧಿ ಮಾತುಗಳನ್ನು ಆಡುತ್ತಿದ್ದು, ಅವರ ಹೇಳಿಕೆಗಳನ್ನು ಖಂಡಿಸುತ್ತೆವೆ. ಯಾವುದೇ ಸಮುದಾಯಗಳನ್ನು ಎಸ್.ಟಿ. ಮೀಸಲಾತಿಯಲ್ಲಿ ಸೇರಿಸಲು ಸಾಂವಿಧಾನಿಕ ಮಾನದಂಡಗಳಿವೆ.
ಮುಖ್ಯವಾಗಿ ಕುಲಶಾಸ್ತ್ರೀಯ ಅಧ್ಯಯನದ ಜೊತೆಗೆ ಬುಡಕಟ್ಟು ಸಂಸ್ಕೃತಿ ಇರಬೇಕು. ಆದರೆ, ಮುಖ್ಯಮಂತ್ರಿಗಳು ಇದನ್ನೆಲ್ಲಾ ತಿರಸ್ಕರಿಸಿದಂತೆ ಕಾಣುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದರೂ ಕೂಡ ಹೋದಲ್ಲಿ ಬಂದಲ್ಲಿ ಕಾನೂನಾತ್ಮಕವಾಗಿ ಮಾತನಾಡದೇ, ಇತರ ಸಮುದಾಯಗಳನ್ನು ರಾಜಕೀಯವಾಗಿ ಸೆಳೆಯಲು ಎಸ್.ಟಿ.ಮೀಸಲಾತಿಯಲ್ಲಿ ಸೇರಿಸಲಾಗವುದು ಎಂದು ಹೇಳುತ್ತಾ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ.
ಇತ್ತೀಚಿಗೆ ಗಂಗಾಮತಸ್ಥರಿಗೆ ಎಸ್.ಟಿ.ಮೀಸಲಾತಿ ನೀಡಲಾಗುವುದು ಎಂದು ಹೇಳಿದ್ದಾರೆ. ಇಂತಹ ಹೇಳಿಕೆಗಳು ಸಿಎಂ ಸ್ಥಾನದಲ್ಲಿ ಇದ್ದವರಿಂದ ನಿರೀಕ್ಷೆ ಮಾಡಿರಲಿಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶ ಕಾಣುತ್ತಿದೆ. ಎಸ್ಸಿ-ಎಸ್.ಟಿ ಸಮುದಾಯಗಳು ಹಿಂದುಳಿದಿದ್ದು ಅವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಜನರ ಕಲ್ಯಾಣ ಮಾಡದೇ ಈ ತರಹದ ಹೇಳಿಕೆ ನೀಡುತ್ತಾ ದಲಿತರ ಮೀಸಲಾತಿಕ್ಕೆ ಕೊಳ್ಳಿ ಇಡುವ ಕೆಲಸದಲ್ಲಿ ಬಿಜೆಪಿ ಸರ್ಕಾರ ಮಾಡುತ್ತಿದೆ.
ಸಿಎಂ ಬೊಮ್ಮಾಯಿ ಅವರು ತಮ್ಮ ಹೇಳಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದಾದ್ಯಾಂತ ನಾಯಕ ಸಮುದಾಯದಿಂದ ಸಿಎಂ ಬೊಮ್ಮಾಯಿ ಹಾಗೂ ಸರಕಾರದ ವಿರುದ್ದ ಪ್ರತಿಭಟನೆ ನಡೆಸಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತದೆ ಎಂದು ಎಚ್ಚರಿಕೆ ನೀಡಿದರು. ವಾಲ್ಮೀಕಿ ಸಮುದಾಯದ ಎಲ್ಲಾ ಪಕ್ಷದ ೧೭ ಶಾಸಕರು ಆಯಾ ಪಕ್ಷದ ಕೈ ಗೊಂಬೆಯಾಗಿದ್ದಾರೆ. ಸಮಾಜದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದು ವಿಪರ್ಯಾಸವೆ ಸರಿ. ಸಮಾಜದ ಒಳಿತಿಗಾಗಿ ಶಾಸಕರು ಧ್ವನಿ ಎತ್ತಬೇಕಿದೆ ಇಲ್ಲವಾದಲ್ಲಿ ನಾಯಕ ಸಮುದಾಯ ಇದ್ದರೂ ಇಲ್ಲದಂತಾಗುವುದರಲ್ಲಿ ಅಚ್ಚರಿ ಇಲ್ಲ ಎಂದರು.
ಈ ಸಂದರ್ಭದಲ್ಲಿ ಪ.ಪಂಚಾಯತಿ ಮಾಜಿ ಸದಸ್ಯ ಚಿನ್ನಾನ್ ನಾಗರಾಜ, ವೆಂಕಟೇಶ ದೊರೆ, ಮಹರ್ಷಿ ವಾಲ್ಮೀಕಿ ನಾಯಕರ ಮಹಾ ವೇದಿಕೆಯ ತಾಲೂಕ ಅಧ್ಯಕ್ಷ ವಸಂತ ನಾಯಕ್, ಅಮರೇಶ ನಾಯಕ್, ರಂಗನಾಥ ನಾಯಕ್ ಯಲ್ಲಪ್ಪ ದೊರೆ, ಮಲ್ಲಿಕಾರ್ಜುನ ನಾಯಕ್, ಅಪ್ಪಾಜಿ ನಾಯಕ ಸೇರಿದಂತೆ ವಾಲ್ಮೀಕಿ ಸಮಾಜದವರಿದ್ದರು.