ಎಸ್‍ಟಿಗೆ ಸೇರಿಸದಿದ್ದರೆ ಮುಂದಿನ ಚುನಾವಣೆಗಳಿಗೂ ಬಿಜೆಪಿ ಹಠಾವೋ ಕೋಲಿ ಸಮಾಜ ಬಚಾವೋ ಅಭಿಯಾನ

ಕಲಬುರಗಿ,ಮೇ.16: ಕೊಟ್ಟ ಭರವಸೆಯಂತೆ ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸುವಲ್ಲಿ ವಿಫಲವಾದ ಬಿಜೆಪಿಯನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಲು ಕರೆ ನೀಡಿದ್ದರ ಹಿನ್ನೆಲೆಯಲ್ಲಿ ಮೋಸ ಮಾಡಿದ ಬಿಜೆಪಿಗೆ ಕೋಲಿ ಸಮಾಜದವರು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸಬೇಕು. ಇಲ್ಲದೇ ಹೋದರೆ ಮುಂಬರುವ ಲೋಕಸಭಾ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿಯೂ ಸಹ ಬಿಜೆಪಿ ಹಠಾವೋ, ಕೋಲಿ ಸಮಾಜ್ ಬಚಾವೋ ಅಭಿಯಾನ ಕರ್ನಾಟಕ ರಾಜ್ಯಾದ್ಯಂತ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ಕೋಲಿ ಎಸ್‍ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ್ ಅವರು ಎಚ್ಚರಿಸಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಸರ್ಕಾರವು ಕೊಟ್ಟ ಭರವಸೆಯಂತೆ ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸಲಿಲ್ಲ. ಇದರಿಂದಾಗಿ ಕೋಲಿ ಸಮಾಜವು ಮೋಸ ಮಾಡಿದ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸುವ ತೀರ್ಮಾನ ತೆಗೆದುಕೊಂಡಿತು. ಅದರಂತೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಸಮಾಜವು ತಕ್ಕ ಪಾಠ ಕಲಿಸಿದೆ ಎಂದರು.
ವಿಧಾನಸಭಾ ಉಪ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಸೇರಿದಂತೆ ಬಹುತೇಕ ಸಚಿವರು ಹಾಗೂ ಬಿಜೆಪಿಯ ನಾಯಕರು ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸುವುದಾಗಿ ಭರವಸೆ ನೀಡಿದ್ದರು. ವಿಶೇಷವಾಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸುವುದಾಗಿ ರಕ್ತದಲ್ಲಿ ಬರೆದುಕೊಡುವುದಾಗಿ ಘೋಷಿಸಿದ್ದರು. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಸಹ ಬಿಜೆಪಿಗೆ ಕೋಲಿ ಸಮಾಜವು ತಕ್ಕ ಪಾಠ ಕಲಿಸಲಿದೆ ಎಂದು ಅವರು ಹೇಳಿದರು.
ಕೂಡಲೇ ಕೇಂದ್ರದಲ್ಲಿ ಬಾಕಿ ಇರುವ ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸಲು ಮುಂದಾಗಬೇಕು. ಇಲ್ಲದೇ ಹೋದಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುವ ತೀರ್ಮಾನವು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿಯೂ ಸಹ ಮುಂದುವರೆಯಲಿದೆ. ಕರ್ನಾಟಕ ರಾಜ್ಯಾದ್ಯಂತ ಅಭಿಯಾನಾ ಆರಂಭಿಸಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ರಾಮಲಿಂಗ್ ಎಸ್. ನಾಟೀಕಾರ್, ಶಿವು ಧಣ್ಣಿ, ಹಣಮಂತ್ ಸಂಕನೂರ್, ಅಂಬಾರಾಯ್ ಜವಳಗಿ, ರಾಮಲಿಂಗ್ ಬಾನರ್, ಶಿವರಾಜ್ ಹುಣಚಗೇರಿ, ಗುರು ಕರಾಟೆ, ಪಿಂಟು ಜಮಾದಾರ್, ನಾಗಿಂದ್ರಪ್ಪ ಲಿಂಗಮಪಲ್ಲಿ, ದೇವಿಂದ್ರ ಜಮಾದಾರ್ ಮುಂತಾದವರು ಉಪಸ್ಥಿತರಿದ್ದರು.