ಎಸ್‍ಎಸ್‍ಎಲ್‍ಸಿ ಫಲಿತಾಂಶ ಜಿಲ್ಲೆಗೆ ಜೇವರ್ಗಿ ಪ್ರಥಮ: ಡಾ. ಅಜಯಸಿಂಗ್

ಕಲಬುರಗಿ:ಮೇ.11: ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಕಲಬುರ್ಗಿ ಜಿಲ್ಲೆಗೇ ಜೇವರ್ಗಿ ತಾಲ್ಲೂಕು ಮೊದಲ ಸ್ಥಾನ ಪಡೆದು ಗಮನ ಸೆಳೆದಿದೆ ಎಂದು ಕ್ಷೇತ್ರದ ಶಾಸಕರೂ ಆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ಜೇವರ್ಗಿ ತಾಲ್ಲೂಕಿನಲ್ಲಿ 3, 371 ಬಾಲಕರು, 3, 260 ಬಾಲಕಿಯರು ಸೇರಿದಂತೆ ಒಟ್ಟು 6, 631 ಮಕ್ಕಳು ಪರೀಕ್ಷೆ ಬರೆದಿದ್ದರು. ಆ ಪೈಕಿ 1, 907 ಬಾಲಕರು, 2, 418 ಬಾಲಕರು ಸೇರದಂತೆ 4, 325 ಮಕ್ಕಳು ತೇರ್ಗಡೆಯಾಗಿದ್ದಾರೆ. ಪರೀಕ್ಷೆ ಬರೆದು ತೇರ್ಗಡೆಯಾದಂತಹ ಬಾಲಕರ ಶೇಕಡಾವಾರು ಫಲಿತಾಂಶ ಪ್ರಮಾಣ 56. 57 ಹಾಗೂ ಬಾಲಕಿಯರ ಶೇಕಡಾವಾರು ಫಲಿತಾಂಶ ಶೇಕಡಾ 74.11ರಷ್ಟಾಗಿದೆ. ಇದರೊಂದಿಗೆ ಜೇವರ್ಗಿ ತಾಲ್ಲೂಕಿನ ಒಟ್ಟಾರೆ ಫಲಿತಾಂಶ ಶೇಕಡಾ 65. 22ರಷ್ಟು ದಾಖಲಾಗಿದೆ. ಇದು ಕಲಬುರ್ಗಿ ಜಿಲ್ಲೆಯಲ್ಲಿ ಬರುವ ಎಲ್ಲ ತಾಲ್ಲೂಕುಗಳಿಗೆ ಹೋಲಿಕೆ ಮಾಡಿದರೆ ಅತೀ ಹೆಚ್ಚಿನ ಫಲಿತಾಂಶವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿಕೆಯಲ್ಲಿ ಅಂಕಿ, ಅಂಶಗಳೊಂದಿಗೆ ವಿವರಿಸಿದ್ದಾರೆ.
ರಾಜ್ಯದ, ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ಕುಸಿತವಾದರೂ ಕೂಡಾ ಜೇವರ್ಗಿ ಮಕ್ಕಳು ನಿರಂತರ ಓದಿನೆಡೆ ಗಮನ ಹರಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಅಲ್ಲದೆ ಜೇವರ್ಗಿಯಲ್ಲಿ ಕಳೆದ 2019ರಿಂದ ಧರ್ಮಸಿಂಗ್ ಫೌಂಡೇಷನ್ ಸಹಯೋಗದಲ್ಲಿ ನಡೆಯುತ್ತಿರುವ ಅಕ್ಷರ ಅವಿಷ್ಕಾರ ಮಿಶನ್- 100 ಯೋಜನೆ ಇದೀಗ ನಿಜವಾದಂತಹ ಫಲ ನೀಡುತ್ತಿದೆ ಎಂದು ಅವರು ಯೋಜನೆಯ ಕುರಿತು ಆಶಾ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಜೇವರ್ಗಿಯಲ್ಲಿ ಕೈಗೊಂಡಂತಹ ಅಕ್ಷರ ಅವಿಷ್ಕಾರ ಮಿಶನ್- 100 ಮಾದರಿಯಲ್ಲಿಯೇ ಇಡೀ ಕಲ್ಯಾಣದ 7 ಜಿಲ್ಲೆಗಳಲ್ಲಿಯೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಎಸ್‍ಎಸ್‍ಎಲ್‍ಸಿ ಫಲಿತಂಶ ಹೆಚ್ಚಳಕ್ಕೆ ಯೋಜನೆ ರೂಪಿಸಿ ಮುಂದಡಿ ಇಟ್ಟಿದೆ. ಈಗಾಗಲೇ ಕಲಿಕಾ ಆಸರೆ ಪುಸ್ತಕಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಬರುವ ದಿನಗಳಲ್ಲಿ ಈ ಯೋಜನೆಯಡಿಯಲ್ಲಿ ಹೆಚ್ಚಿನ ಸುಧಾರಣೆ ಮಾಡಿ ಮಕ್ಕಳು ಕಲಿಕೆಯ ಯಾವ ಹಂತದಲ್ಲಿ ತೊಂದರೆ ಎದುರಿಸುತ್ತಿದ್ದಾರೆಂಬುದನ್ನು ಅರಿತು ಆ ಹಂತದಲ್ಲೇ ಮಕ್ಕಳಿಗೆ ಆಸರೆಯಾಗುವ ದಿಶೆಯಲ್ಲಿ ಮಂಡಳಿಯು ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.
ಮಂಡಳಿಯು ಮುಂದಿನ ವರ್ಷವನ್ನು ಶಿಕ್ಷಣ ವರ್ಷವನ್ನಾಗಿ ಘೋಷಿಸಲಿದೆ. ಹೆಚ್ಚಿನ ಅನುದಾನ ಶಾಲಾ ಶಿಕ್ಷಣ ಮೂಲ ಸೌಲತ್ತು, ಫಲಿತಾಂಶ ವೃದ್ದಿಗೆ ಮೀಸಲಿಟ್ಟು ಕೆಲಸ ಮಾಡಲಿದೆ. ಈ ವಿಷಯವಾಗಿ ತಜ್ಞರೊಂದಿಗೆ ಚರ್ಚಿಸಿ ಮುಂದೆ ಸಾಗುತ್ತೇವೆ. ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸೇರಿಕೊಂಡು ಮಂಡಳಿ ಬರುವ ಶಿಕ್ಷಣ ವರ್ಷವೂ ಯೋಜನೆ ಜಾರಿಗೆ ತರಲಿದೆ ಎಂದು ಅವರು ಘೋಷಿಸಿದ್ದಾರೆ.
ಯಾವುದೇ ಯೋಜನೆ ಜಾರಿಗೊಂಡು ಫಲ ನೀಡಲು ಕನಿಷ್ಠ 4ರಿಂದ 5 ವರ್ಷ ಬೇಕು. ಆ ಮಾತಿಗೆ ಜೇವರ್ಗಿಯೇ ಮಾದರಿ. ಹೀಗಾಗಿ ನಾವು ಫಲಿತಾಂಶ ಮೊದಲಿಗೆ ಸರಿ ಬರಲಿಲ್ಲವೆಂದರೆ ನಿರಾಶರಾಗಬೇಕಿಲ್ಲ. ಅನೇಕ ಗಟ್ಟಿ ಕ್ರಮಗಳಿಂದಾಗಿ ನಕಲು ತಡೆಯಲಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಕಲಬುರ್ಗಿ ಸೇರಿದಂತೆ ಕಲ್ಯಾಣದ ಜಿಲ್ಲೆಗಳು ತೆರೆದುಕೊಳ್ಳುತ್ತಿವೆ. ಈ ಹಂತದಲ್ಲಿ ಇನ್ನೂ ಹೆಚ್ಚಿನ ಯೋಜನೆಗಳೊಂದಿಗೆ ಮಂಡಳಿ ಮಕ್ಕಳ ನೆರವಿಗೆ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದ್ದಾರೆ.