ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ದೋಷಮುಕ್ತಗೆ ಸಿಇಒ ಸೂಚನೆ

ರಾಯಚೂರು, ಜೂ.೦೭- ಜಿಲ್ಲೆಯ೧೯ ಕೇಂದ್ರಗಳಲ್ಲಿ ಜೂ.೧೨ ರಿಂದ ೧೭ವರೆಗೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಕೇಂದ್ರಗಳಲ್ಲಿ ನಕಲಿಗೆ ಅವಕಾಶ ನೀಡದಂತೆ ಸೂಸುತ್ರವಾಗಿ ಮತ್ತು ವ್ಯವಸ್ಥಿತವಾಗಿ ನಡೆಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಧಿಕಾರಿ ಶಶಿಧರ್ ಕುರೇರ ಅವರು ಹೇಳಿದರು. ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪರೀಕ್ಷೆ ಸುಗಮವಾಗಿ ನಡೆಸಲು ಪರೀಕ್ಷಾ ಕೇಂದ್ರದ ಸುತ್ತ ೨೦೦ ಮೀ. ವ್ಯಾಪ್ತಿಯಲ್ಲಿ ೧೪೪ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳ್ಳಲಿದೆ. ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು. ಕಡ್ಡಾಯವಾಗಿ ಚಾಲ್ತಿಯಲ್ಲಿರುವ ಸಿಸಿಟಿವಿ ವ್ಯವಸ್ಥೆಯನ್ನು ಒದಗಿಸಬೇಕು. ಇಲ್ಲದೇ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಅಥವಾ ನಕಲಿಗೆ ಅವಕಾಶ ನೀಡದಂತೆ ದೋಷಮುಕ್ತ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಒಂದು ಪರೀಕ್ಷೆ ಕೇಂದ್ರಗಳಲ್ಲಿ ಅಕ್ರಮ ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವೀಕ್ಷಕರು ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪರೀಕ್ಷೆ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಕೊರತೆಯಾಗದಂತೆ ಅಧಿಕಾರಗಳು ನಿಗಾವಹಿಸಬೇಕು ಎಂದರು.ಪರೀಕ್ಷೆ ಕೇಂದ್ರಗಳಲ್ಲಿ ಹೆಚ್ಜುವರಿ ಸಿಬ್ಬಂದಿಗಳನ್ನು ನೇಮಕಾತಿಗೆ ಅವಕಾಶ ಇರುವುದಿಲ್ಲ ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರವೀಂದ್ರ ಕರಿಲಿಂಗಣ್ಣ, ಕ್ಷೇತ್ರ ಶೈಕ್ಷಣಾಧಿಕಾರಿ ವೃಷಭಂದ್ರಯ್ಯ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸುರೇಂದ್ರ ಬಾಬು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.