ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಸಿಸಿ ಕ್ಯಾಮರಾ ಅಳವಡಿಸಿರುವುದಕ್ಕೆ ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಅಸಮಾಧಾನ

ಸಂಜೆವಾಣಿ ವಾರ್ತೆ
ಚಾಮರಾಜನಗರ:ಮಾ.26:- ಇಂದಿನಿಂದ ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭಗೊಂಡಿದ್ದು ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದಕ್ಕೆ ಮಾಜಿ ಶಿಕ್ಷಣ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುಂಡ್ಲು ಪೇಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಜೆಪಿ ಅಭ್ಯರ್ಥಿ ಬಾಲರಾಜು ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಿಸಿ ಕ್ಯಾಮರಾ ಕಣ್ಗಾವಲು ಏಕೆ..?, ವಿದ್ಯಾರ್ಥಿಗಳು ಏನು ಕಳ್ಳರೇ, ಪರೀಕ್ಷೆ ಬರೆಯುವುದಕ್ಕೆ ಭಯ ಪಡಿಸುತ್ತಿದ್ದಾರೆ ಎಂದು ಹೇಳಿದರು.
15-16 ವರ್ಷದ ಮಕ್ಕಳು ಕಷ್ಟಪಟ್ಟು ಓದಿಕೊಂಡು ಬಂದಿರುತ್ತಾರೆ ಆದರೆ ವಿದ್ಯಾರ್ಥಿಗಳಿಗೆ ಭಯದ ವಾತಾವರಣ ಸೃಷ್ಟಿ ಮಾಡಲಾಗಿದೆ, ಒಂದು ವೇಳೆ ಕಾಪಿ ಹೊಡೆದರೆ ಏನು ತಪ್ಪು, ಅದು ಮಹಾ ಅಪರಾಧವೇ ಎಂದು ಪ್ರಶ್ನೆ ಮಾಡಿದರು.
ನಾನು ಇನ್ನು ಒಂದು ವರ್ಷ ಶಿಕ್ಷಣ ಸಚಿವನಾಗಿದ್ದರೆ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ತೆರೆದ ಪುಸ್ತಕ ಪರೀಕ್ಷೆ ನೀತಿಯನ್ನು ಜಾರಿಗೆ ತರುತ್ತಿದ್ದೆ, ಅವರು ಓದಿರುವುದು ಏನು ಎಂದು ಗೊತ್ತಿದ್ದರೆ ಬರೆಯುತ್ತಾರೆ, ಇಲ್ಲ ಎಂದರೆ ಎಲ್ಲಿ ಬರೆಯುತ್ತಾರೆ. ಅದಕ್ಕೆ ಸಿಸಿ ಕ್ಯಾಮರಾ ಬೇಕೆ ಎಂದು ಹೇಳಿದರು.