
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಸೆ.೧೭; ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗುಣಾತ್ಮಕ ಅಂಕಗಳನ್ನು ಪಡೆಯಲು ಸಹಾಯಕವಾಗುವಂತೆ ಕ್ರಿಯಾಯೋಜನೆ ತಯಾರಿಸಿ ಅದರಂತೆ ಪಠ್ಯ ಬೋಧನೆಯಲ್ಲಿ ತೊಡಗಬೇಕು ಎಂದು ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.ನಗರದ ವಾಗ್ದೇವಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.ಕಳೆದ ವರ್ಷ ಉತ್ತಮ ಫಲಿತಾಂಶ ಬಂದಿದ್ದು, ಈ ಫಲಿತಾಂಶದ ಸ್ಥಾನವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಸೃಜನಾತ್ಮಕವಾಗಿ ಮತ್ತು ಕ್ರಿಯಾಶೀಲವಾಗಿ ಪಠ್ಯ ಬೋಧನೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು. ಇತ್ತೀಚೆಗೆ ಸರ್ಕಾರಿ ಪ್ರೌಢಶಾಲೆ ಪಿಲಾಜನಹಳ್ಳಿ ಹಾಗೂ ವಸಂತನಗರ ಶಾಲೆಗಳಲ್ಲಿ ಕಳ್ಳತನವಾಗಿದ್ದು, ಮುಖ್ಯ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಬೇಕೆಂದು ಸೂಚಿಸಿದರು. ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಸಬೇಕು ಎಂದು ಹೇಳಿದರು. ಎಸ್‍ಎಸ್‍ಎಲ್‍ಸಿಯಲ್ಲಿ ಕಳೆದ ವರ್ಷ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರಾದ ಆರ್.ಟಿ.ಎಸ್.ಶ್ರೀನಿವಾಸ, ಗಿರೀಶ ಮತ್ತು ಸುಮಿತ್ರ ಮಾತನಾಡಿದರು.ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ ವಿತರಣೆಯ ಅನುದಾನ ಬಿಡುಗಡೆಯಾಗಿದ್ದು, ಇಲಾಖೆಯ ನಿಯಮಾನುಸಾರ ಖರೀದಿಸಿ ವಿತರಿಸಲು ಕ್ಷೇತ್ರ ಸಮನ್ವಯಾಧಿಕಾರಿ ಬಿ.ತಿಪ್ಪೇರುದ್ರಪ್ಪ ತಿಳಿಸಿದರು.
ಸಭೆಯಲ್ಲಿ ಮುಖ್ಯೋಪಾಧ್ಯಾಯರ ಸಂಘದ ಪದಾಧಿಕಾರಿಗಳಾದ ತಿಪ್ಪೇರುದ್ರಪ್ಪ, ನಾಗನಾಯ್ಕ್ , ಮಂಜುನಾಥ್, ವಿ.ಭಾಗ್ಯ ಇದ್ದರು.