ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ:- ಶಾಸಕ ಎಸ್.ವಿ.ರಾಮಚಂದ್ರ

ಜಗಳೂರು.ಮಾ.೭; ತಾಲೂಕು  ಕಳೆದ 3 ವರ್ಷಗಳಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು ಪ್ರಸ್ತುತ ಈ ಬಾರಿಯ ಪರೀಕ್ಷೆಯಲ್ಲಿಯೂ ಸಹ ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಲು ಶ್ರಮವಹಿಸಿ ಶ್ರದ್ಧೆಯಿಂದ ಓದಬೇಕು ಎಂದು ಶಾಸಕ ಎಸ್.ವಿ.ರಾಮಚಂದ್ರ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ತಾಲೂಕಿನ ಉದ್ದಗಟ್ಟ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೋಮವಾರ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿದ ನಂತರ ‘ವಿಜ್ಞಾನ ಮೆರಗು ಪ್ರತಿಭೆಗಳ ಮಿನುಗು’ ಕಾರ್ಯಕ್ರಮ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ನಂತರ  ಮಾತನಾಡಿದರು ಯಾವುದೇ ಒಂದು ಶಾಲೆ ಯಶಸ್ವಿಯಾಗಬೇಕಾದರೆ ಅದಕ್ಕೆ ಶಿಕ್ಷಕರ ಮತ್ತು ಶಿಕ್ಷಕಿಯರ ಜವಾಬ್ದಾರಿ ಮತ್ತು ಪೋಷಕರ ಉಮ್ಮಸ್ಸು ಹೆಚ್ಚಿರುತ್ತದೆ. ನಿಮ್ಮ ಶಾಲೆಯ ಪ್ರಾಂಶುಪಾಲ ಕೆ.ಎಂ.ಕಲ್ಲೇಶ್ ಮತ್ತು ಎಲ್ಲ ಶಿಕ್ಷಕರು ಹೆಚ್ಚು ಶ್ರಮ ವಹಿಸಿತ್ತಿದ್ದು ಕಳೆದ ವರ್ಷ ಹತ್ತನೇ ತರಗತಿ ಫಲಿತಾಂಶದಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ತಾಲೂಕಿನಲ್ಲೇ ಹೆಚ್ಚು ಅಂಕಗಳಿಸುವಂತೆ ಮಾಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಮಕ್ಕಳಿಗೆ ಪಿಯುಸಿ ವರೆಗೆ ಓದುವ ಅಕವಾಶ ಕಲ್ಪಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದೇನೆ. ನಿಮ್ಮ ಶಾಲೆ  ಕ್ರೀಡಾ ವಿಭಾಗದಲ್ಲಿ ಜಿಲ್ಲೆಯಲ್ಲೇ ಹೆಚ್ಚು ಪ್ರಶಸ್ತಿ ತಂದು ಕೊಟ್ಟ ಕೀರ್ತಿ ಉದ್ದಗಟ್ಟ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗೆ ಸಲ್ಲುತ್ತದೆ ಎಂದರು.ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ಮಂಜಾನಾಯ್ಕ ಮಾತನಾಡಿ, ವಸತಿ ಶಾಲೆಗಳಲ್ಲಿ ಮಕ್ಕಳ ಅಭಿವೃದ್ಧಿಗೆ ಸರಕಾರ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಿ ಎಂದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಾಲೆಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ  ಶಾಲೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ಶಾಲೆಗಳು ಕ್ರಿಯಾಶೀಲವಾಗಿವೆ. ಸ್ವಚ್ಛತೆ, ಶಿಕ್ಷಣ ನೀಡುತ್ತಿದ್ದು ಮಕ್ಕಳಿಗೆ ಮನೆಯಂತಹ ವಾತಾವರಣ ನೆಮ್ಮದಿ ಈ ಶಾಲೆಗಳಲ್ಲಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ವಸತಿ ಶಾಲೆಯ  ಪ್ರಾಂಶುಪಾಲ ಕೆ.ಎಂ.ಕಲ್ಲೇಶ್ ಮಾತನಾಡಿ, ಉದ್ದಗಟ್ಟ ಶಾಲೆಗೆ ಸರಕಾರ ಸುಸಜ್ಜಿತ ಕ್ರೀಡಾ ಉಪಕರಣ ಗಳಿಗೆ 5 ಕೋಟಿ ರೂ ಅನುದಾನ ನಮ್ಮ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ಅವರು ಮಂಜೂರು ಮಾಡಿಸಿಕೊಟ್ಟಿದ್ದಾರೆ . ನಮ್ಮ ಕರ್ನಾಟಕ ರಾಜ್ಯದಲ್ಲೇ ಈ ಶಾಲೆ 2ನೇಯದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಗುಣಾತ್ಮಕ ಫಲಿತಾಂಶ ನೀಡುತ್ತಿದೆ. ಎಲ್ಲರೂ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು