
“
ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ28. ಈವರ್ಷ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿಗಳ ಮನೆಗೆ ನಾನು ಮತ್ತು ತಾಲೂಕಿನ ಬಿಇಓ ಜೊತೆಗೆ ಬಂದು ಸನ್ಮಾನಿಸುತ್ತೇವೆಂದು ಬಳ್ಳಾರಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಅಂದಾನಪ್ಪ ವಡಿಗೇರ್ ರವರು ತಿಳಿಸಿದರು. ಇಂದು ಸಿರಿಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಳ್ಳಾರಿ ಮತ್ತು ಸಿರುಗುಪ್ಪ ವತಿಯಿಂದ ಸಿರಿಗೇರಿ ಕ್ಲಸ್ಟರ್ನ 07 ಪ್ರೌಢಶಾಲೆಗಳ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಮತ್ತು ಪ್ರೇರಣಾ ಕಾರ್ಯಕ್ರಮದಲ್ಲಿ ಮಾತನಾಡಿ ಸಾಮಾನ್ಯರೂ ಸಾಧನೆ ಮಾಡಬಲ್ಲವರು ಎಂಬುದನ್ನು ಇಂದು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಬಂದಿರುವ ರಮೇಶ್ ಬಲ್ಲಿದ್ ರವರು ಸಾಬೀತು ಮಾಡಿದ್ದಾರೆ. ಶಾಲೆಗೆ ಹೋಗದೇ ಕುರಿ ಕಾಯುತ್ತಿದ್ದ ವ್ಯಕ್ತಿ ಒಂದು ಎನ್ಜಿಒ ಕಂಪನಿ ನೀಡಿದ ಕೇವಲ 6 ತಿಂಗಳ ತರಬೇತಿಯಿಂದ ರಾಜ್ಯದದ್ಯಂತ 4ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಗಾಗಿ ಇಲಾಖೆಯಿಂದ ಸಾಧ್ಯವಾಗುವ ಎಲ್ಲಾರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಡಲಾಗುವುದು ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಓದಿ ಒಳ್ಳೆಯ ಫಲಿತಾಂಶ ತರಬೇಕು. ಇದಕ್ಕೆ ಎಲ್ಲಾ ಪೋಷಕರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತುನೀಡಿ ಸಹಕರಿಸಿದರೆ ಉತ್ತಮ ಎಂದು ತಿಳಿಸಿದರು. ನಂತರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ.ಭಜಂತ್ರಿ ಮಾತನಾಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಅವರ ಬುದ್ದಿಮಟ್ಟ ಹೆಚ್ಚಿಸಲು ಗುರುರಾಜ ಕರ್ಜಗಿ, ಡಿ.ಚನ್ನಣ್ಣನವರ್, ರಮೇಶ್ ಬಲ್ಲಿದ್ ರಂತಹ ಸಾಧಕರನ್ನು ಕರೆಸಿ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಕಳೆದೆರಡು ವರ್ಷಗಳಿಂದ ನಮ್ಮ ತಾಲೂಕು ವಿದ್ಯಾರ್ಥಿಗಳು ಒಳ್ಳೆ ಫಲಿತಾಂಶ ತರುತ್ತಿದ್ದಾರೆ ಇದು ಇನ್ನೂ ಹೆಚ್ಚಾಗಬೇಕೆಂದರು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಉಪನ್ಯಾಸಕ ರಮೇಶ್ ಬಲ್ಲಿದ್ ವಿದ್ಯಾರ್ಥಿಗಳಿಗೆ ಓದಿನಲ್ಲಿ ತೊಡಗಿಕೊಳ್ಳುವ ಕುರಿತು, ಕಠಿಣ ವಿಷಯಗಳನ್ನು ಕರಗತ ಮಾಡಿಕೊಳ್ಳುವ ಕುರಿತು ಉಪನ್ಯಾಸ ಮಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಶಿಕ್ಷಣ ಸಂಯೋಜಕರು, ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳು, ಕಾರ್ಯಕ್ರಮ ಸಂಘಟಕರು ಮತ್ತು ಮುಖ್ಯಗುರುಗಳಾದ ಕೆ.ವೀರಪ್ಪ, ಫರ್ವೆಜ್ ಅಹಮ್ಮದ್, ಎನ್.ಪಂಪಾಪತಿ, ವಿರುಪಾಕ್ಷಗೌಡ, ವೆಂಕಟೇಶ್ ಮತ್ತು ಇತರೆ ಮುಖ್ಯಗುರುಗಳು, ಸಹಶಿಕ್ಷಕರು, ಸಿರಿಗೇರಿಯ 4 ಮತ್ತು ಮುದ್ದಟನೂರು, ಶಾನವಾಸಪುರ, ಕೊಂಚಿಗೇರಿ ಪ್ರೌಢಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳು ಇದ್ದರು. ಶಿಕ್ಷಕರಾದ ನಾಗವೇಣಿ.ಎಚ್.ಎಂ. ಮತ್ತು ಎನ್. ವಿಶಾಲಮ್ಮ, ನಿರ್ವಸಹಿಸಿದರು.