ಎಸ್‌ಎಫ್‌ಸಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಬಿಜೆಪಿ ಸದಸ್ಯರ ಪ್ರತಿಭಟನೆ

ಕುಣಿಗಲ್, ಜು. ೨೬- ಕಾಂಗ್ರೆಸ್ ಆಡಳಿತ ನಡೆಸುವ ಪುರಸಭೆಯಲ್ಲಿ ಶಾಸಕರ ಎಸ್ ಎಫ್‌ಸಿ ೬ ಕೋಟಿ ಅನುದಾನದಲ್ಲಿ ಬಿಜೆಪಿ ಸದಸ್ಯರ ವಾರ್ಡುಗಳಿಗೆ ನೀಡುವ ಹಣದಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕರು ಧರಣಿ ನಡೆಸಿದರು.
ಇಲ್ಲಿನ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ, ಬಿಜೆಪಿ ಸದಸ್ಯರಾದ ಕೃಷ್ಣ, ಆನಂದ್‌ಕುಮಾರ್, ಕೋಟೆ ನಾಗಣ್ಣ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭೆಯ ಮುಂದಿನ ಆವರಣದಲ್ಲಿ ಧರಣಿ ಆರಂಭಿಸಿ, ಸಾಮಾನ್ಯ ಸಭೆ ಮಾಡಲು ಬಿಡುವುದಿಲ್ಲ ಎಂದು ಪುರಸಭಾ ಕಾಂಗ್ರೆಸ್ ಆಡಳಿತ ವಿರುದ್ಧ ಘೋಷಣೆಗಳನ್ನು ಕೂಗಿದರು.
ರಾಜ್ಯ ಸರ್ಕಾರ ಎಸ್. ಎಫ್ ಸಿ ಯೋಜನೆಯಡಿಯಲ್ಲಿ ೬ ಕೋಟಿ ರೂ.ಗಳು ಪುರಸಭೆಗೆ ಅನುದಾನ ಬಂದಿದ್ದು ೯ ಹಾಗೂ ೨೦ ನೇ ವಾರ್ಡಿನ ಬಿಜೆಪಿ ಸದಸ್ಯರ ವಾರ್ಡಿಗೆ ಯಾವುದೇ ಅನುದಾನ ನೀಡದೆ ಕಾಂಗ್ರೆಸ್ ಸದಸ್ಯರ ವಾರ್ಡುಗಳಿಗೆ ೧೫ ರಿಂದ ೨೦ ಲಕ್ಷ ರೂ.ಗಳವರೆಗೆ ಹೆಚ್ಚು ಅನುದಾನ ನೀಡಿ ಶಾಸಕರು, ಪುರಸಭಾಧ್ಯಕ್ಷರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಬಿಜೆಪಿ ಸದಸ್ಯರು ಧರಣಿ ಹಿಂದಕ್ಕೆ ಪಡೆದು ಸಾಮಾನ್ಯ ಸಭೆ ನಡೆಯಲು ಅವಕಾಶ ಮಾಡಿಕೊಡಬೇಕು. ಮುಂದಿನ ಎಸ್‌ಎಫ್‌ಸಿ ಅನುದಾನದ ೨ ಕೋಟಿ ರೂ. ಹೆಚ್ಚುವರಿಯಾಗಿ ಬಂದಿದ್ದು ಅದರಲ್ಲಿ ೯ ಹಾಗೂ ೨೦ನೇ ವಾರ್ಡಿಗೆ ತಲಾ ೧೦ ಲಕ್ಷ ರೂಪಾಯಿ ಅನುದಾನ ನೀಡುವ ಭರವಸೆ ನೀಡಿದ ಮೇರೆಗೆ ಧರಣಿ ನಿರತ ಬಿಜೆಪಿ ಸದಸ್ಯರು ಪ್ರತಿಭಟನೆಯನ್ನು ಹಿಂಪಡೆದರು.
ದೊಡ್ಡಕೆರೆ ಸೋಮೇಶ್ವರ ದೇವಸ್ಥಾನ ಹಾಗೂ ಉಪ್ಪಾರ ಬಿದಿಯ ಕೊಲ್ಲಾಪುರ ದೇವಸ್ಥಾನದವರೆಗೆ ೫ ಲಕ್ಷ ರೂ. ವೆಚ್ಚದಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಯಿತು ಎಂದರು.
ಸದಸ್ಯ ಶಮಿವುಲ್ಲಾ, ಮದ್ದೂರು ರಸ್ತೆಯ ಹಿಂದೂ ಹಾಗೂ ಮುಸ್ಲಿಂ ಸ್ಮಶಾನದಲ್ಲಿ ಓಡಾಡುವ ರಸ್ತೆಯಲ್ಲಿ ವಿದ್ಯುತ್ ದೀಪಗಳಿಲ್ಲದೆ ತೊಂದರೆ ಆಗಿರುವುದರಿಂದ ಕೂಡಲೇ ಆ ಭಾಗಕ್ಕೂ ವಿದ್ಯುತ್ ದೀಪ ಅಳವಡಿಸುವಂತೆ ಆಗ್ರಹಿಸಿದರು.
ಸಭೆಯಲ್ಲಿ ಸದಸ್ಯರಾದ ಎಸ್.ಕೆ. ನಾಗೇಂದ್ರ, ರಾಮು, ಅರುಣ್‌ಕುಮಾರ್, ಉಪಾಧ್ಯಕ್ಷೆ ತಬಸಂ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಮುಖ್ಯಾಧಿಕಾರಿ ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.