ಎಸ್‌ಎಫ್‌ಸಿಎಸ್‌ಗೆ 31 ಲಕ್ಷ ರೂ ನಿವ್ವಳ ಲಾಭ-ದಯಾನಂದ್

ಕೋಲಾರ,ಜೂ,೧೭- ತಾಲ್ಲೂಕಿನ ಕಡಗಟ್ಟೂರು ಎಸ್‌ಎಫ್‌ಸಿಎಸ್ ರೈತರಿಗೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಿರುವ ಸಾಲ ಶೇ.೧೦೦ ವಸೂಲಾತಿಯ ಜತೆಗೆ ಪ್ರಸ್ತುತ ೨೦೨೨-೨೩ನೇ ಸಾಲಿನಲ್ಲಿ ೩೧ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷರೂ ಹಾಗೂ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆದ ಕೆ.ವಿ.ದಯಾನಂದ್ ತಿಳಿಸಿದರು.
ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೇ ಪ್ರಥಮವೆನ್ನುವ ಹೆಗ್ಗಳಿಕೆಯೊಂದಿಗೆ ನಡೆದ ೨೦೨೨-೨೩ನೇ ಸಾಲಿನ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕಡಗಟ್ಟೂರು ರೈತರು ಹಾಗೂ ರೇಷ್ಮೆ ಬೆಳೆಗಾರರ ಸಹಕಾರ ಸಂಘದಿಂದ ರೈತರಿಗೆ ಕೃಷಿ ಸಾಲ, ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲ, ಮಧ್ಯಮಾವಧಿ ಸಾಲ ಸೇರಿದಂತೆ ವಿತರಿಸಿದ್ದ ವಿವಿಧ ಸಾಲಗಳ ವಸೂಲಾತಿಯಲ್ಲಿ ಅವಿಭಜಿತ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿದ್ದು, ಶೇ.೧೦೦ ವಸೂಲಾತಿಯೊಂದಿಗೆ ಲಾಭದಲ್ಲಿ ಸಾಗಿದೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಹಾಗೂ ರಾಜ್ಯದ ಹಲವೆಡೆ ಸಾಲ ಮನ್ನಾ ಆಗ್ರಹದ ಹೋರಾಟಗಳು ನಡೆಯುತ್ತಿರುವ ಕಠಿಣ ಸಂದರ್ಭದಲ್ಲೂ ನಮ್ಮ ಸೊಸೈಟಿಯಲ್ಲಿ ಸಾಲ ಪಡೆದ ರೈತರು,ಮಹಿಳೆಯರು ಸಕಾಲಕ್ಕೆ ಸಾಲ ಮರುಪಾವತಿಸಿ ದಾಖಲೆ ಬರೆದಿದ್ದಾರೆ, ಅವರಿಗೆ ಸಂಘದ ಪರವಾಗಿ ಧನ್ಯವಾದ ಸಲ್ಲಿಸುವೆ ಎಂದು ಹೇಳಿದರು.
ಡಿಸಿಸಿಬ್ಯಾಂಕ್ ನಿರ್ದೇಶಕರೂ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷರಾದ ನಾಗನಾಳ ಸೋಮಣ್ಣ ಮಾತನಾಡಿ, ಸಾಲ ಮನ್ನಾ ವದಂತಿಗಳಿಗೆ ಕಿವಿಗೊಡದಿರಿ, ನಿಮಗೆ ಡಿಸಿಸಿ ಬ್ಯಾಂಕ್ ಆಶ್ರಯದಲ್ಲಿ ಸೊಸೈಟಿ ಶೂನ್ಯಬಡ್ಡಿಯ ಸಾಲ ನೀಡಿದೆ, ಯಾವುದೇ ಭದ್ರತೆ ಇಲ್ಲದೇ ಮಹಿಳೆಯರ ಮೇಲಿನ ನಂಬಿಕೆಯಿಂದ ಕೋಟಿಗಟ್ಟಲೆ ಸಾಲ ನೀಡಿದ್ದೇವೆ ಎಂದರು.
ಸರ್ಕಾರ ಸಾಲ ಮನ್ನಾ ಮಾಡುವುದಾದರೆ ನಮ್ಮ ಅಭ್ಯಂತರವಿಲ್ಲ ಆದರೆ ಸಾಲ ಪಡೆದವರು ಸಕಾಲಕ್ಕೆ ಕಂತು ಪಾವತಿಸದಿದ್ದರೆ ನಿಮಗೆ ಬಡ್ಡಿಯ ಹೊರೆ ಬೀಳುತ್ತದೆ, ಬ್ಯಾಂಕ್ ಸಹಾ ಆರ್ಥಿಕವಾಗಿ ತೊಂದರೆಗೆ ಸಿಲುಕುತ್ತದೆ ಎಂದು ಅಭಿಪ್ರಾಯಪಟ್ಟರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ ನೀಡುತ್ತಿರುವ ಸಾಲದ ಹಣ ಸರ್ಕಾರದಿಂದ ನೀಡುವುದಿಲ್ಲ ಬ್ಯಾಂಕಿನ ಸ್ವಂತ ಬಂಡವಾಳ,ಠೇವಣಿ ಜತೆಗೆ ಅಫೆಕ್ಸ್ ಬ್ಯಾಂಕ್ ಹಾಗೂ ನಬಾರ್ಡ್‌ನಿಂದ ಸಾಲ ತಂದು ವಿತರಿಸುತ್ತಿದ್ದೇವೆ ಎಂದು ಹೇಳಿದರು.
ಕಳೆದ ೧೦ ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕಿನ ಪರಿಸ್ಥಿತಿ ಹೇಗಿತ್ತು ಎಂಬುದರ ಅರಿವು ನಮ್ಮ ರೈತರಿಗಿದೆ, ಮತ್ತೆ ಅಂತಹ ದಿವಾಳಿಯ ವಾತಾವರಣ ಸೃಷ್ಟಿಯಾದರೆ ಮತ್ತೆಂದೂ ರೈತರು, ಮಹಿಳೆಯರಿಗೆ ಶೂನ್ಯಬಡ್ಡಿಯಂತಹ ಸಾಲ ಸೌಲಭ್ಯಗಳು ಸಿಗದಂತಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಗ್ರಾ.ಪಂ ಸದಸ್ಯರಾದ ಸುರೇಶ್, ಹರೀಶ್, ಕಡಗಟ್ಟೂರು ಎಸ್‌ಎಫ್‌ಸಿಎಸ್ ಉಪಾಧ್ಯಕ್ಷ ಡೇವಿಡ್, ನಿರ್ದೇಶಕರಾದ ವೆಂಕಟೇಶ್, ರೆಡ್ಡಿ, ಅಂಬರೀಷ್, ರಾಮಾಂಜಿನೇಯ, ರಾಜಣ್ಣ , ಮುನಿರಾಜು, ವಿಜಯಮ್ಮ, ಬೈರಮ್ಮ, ಮಂಜುನಾಥ್, ಮಾಜಿ ನಿರ್ದೇಶಕರಾದ ರಾಮಣ್ಣ, ಲಕ್ಷ್ಮಣ್, ಪ್ರಗತಿಪರ ರೈತ ಕೆ.ಎಂ.ಚಂದ್ರೇಗೌಡ,ನಾರಾಯಣಸ್ವಾಮಿ,ಸೊಸೈಟಿ ಸಿಇಒ ಮುನೀಶ್ವರಪ್ಪ ಮತ್ತಿತರರಿದ್ದರು.