ಎಸ್‌ಎನ್‌ಬಿಯಿಂದ ೫೪ ಶತಕೋಟಿ. ಸಾಲ ಪಡೆದ ಕ್ರೆಡಿಟ್ ಸ್ಯೂಸ್ಸೆ

ನ್ಯೂಯಾರ್ಕ್, ಮಾ.೧೬- ಎಸ್‌ವಿಬಿ ಬಳಿಕ ಇದೀಗ ಅಮೆರಿಕಾದ ಹಲವು ಬ್ಯಾಂಕ್‌ಗಳು ಕೂಡ ಸಂಕಷ್ಟದ ಸುಲಿಗೆ ಸಿಲುಕಿದ್ದು, ಈ ನಡುವೆ ಠೇವಣಿದಾರರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಠೇವಣಿ ಬಿಕ್ಕಟ್ಟಿನ ಆತಂಕ ನಿವಾರಿಸುವ ಸಲುವಾಗಿ ಜಾಗತಿಕ ಹಣಕಾಸು ಸೇವೆಗಳ ಸಂಸ್ಥೆ ಕ್ರೆಡಿಟ್ ಸ್ಯೂಸ್ಸೆ ಇದೀಗ ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್‌ಬಿ)ನಿಂದ ಬರೊಬ್ಬರಿ ೫೪ ಬಿಲಿಯನ್ ಡಾಲರ್ (೪,೩೨,೦೦೦ ಕೋಟಿ ರೂ.) ಸಾಲ ಪಡೆಯಲು ನಿರ್ಧರಿಸಿದೆ. ಈ ಮೂಲಕ ನಗದು ಪ್ರಮಾಣ ಬಲಪಡಿಸಲು ಕಠಿಣ ಕ್ರಮ ತೆಗೆದುಕೊಂಡಿದೆ.
ಕ್ರೆಡಿಟ್ ಸ್ಯೂಸ್ಸೆಗೆ ಮುಂದೆ ಯಾವುದೇ ರೀತಿಯಲ್ಲಿ ಹಣಕಾಸಿನ ನೆರವು ನೀಡಲು ಸಾಧ್ಯವಿಲ್ಲ ಎಂದು ಈಗಾಗಲೇ ಸಂಸ್ಥೆಯ ಉನ್ನತ ಹೂಡಿಕೆದಾರರಲ್ಲಿ ಒಂದಾಗಿದ್ದ ಸೌದಿ ನ್ಯಾಷನಲ್ ಬ್ಯಾಂಕ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕ್ರೆಡಿಟ್ ಸ್ಯೂಸ್ಸೆ ಷೇರುಗಳು ಅಲ್ಪಮೊತ್ತಕ್ಕೆ ಮಾರಾಟವಾಗಿದೆ. ಅಲ್ಲದೆ ಕ್ರೆಡಿಟ್ ಸ್ಯೂಸ್ಸೆಗೆ ನೆರವು ನೀಡಲು ಸ್ವಿಸ್ ಬ್ಯಾಂಕ್ ಕೂಡ ಹಿಂದೇಟು ಹಾಕಿದೆ. ಇದರ ಪರಿಣಾಮ ಇಲ್ಲಿತನಕ ಅಮೆರಿಕಾದಲ್ಲಿ ಭಾರೀ ಚರ್ಚೆಯಲ್ಲಿದ್ದ ಬ್ಯಾಂಕ್ ಕುಸಿತದ ಆಘಾತ ನೇರವಾಗಿ ಯುರೋಪ್‌ಗೆ ವರ್ಗಾವಣೆಗೊಂಡಿದೆ. ಇನ್ನು ಸದ್ಯದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ರೆಡಿಟ್ ಸ್ಯೂಸ್ಸೆ, ಇದೀಗ ನಡೆದ ಬೆಳವಣಿಗೆ (ಸ್ವಿಸ್ ರಾಷ್ಟ್ರೀಯ ಬ್ಯಾಂಕ್‌ನಿಂದ ಸಾಲ)ಯಲ್ಲಿ ಕ್ರೆಡಿಟ್ ಸ್ಯೂಸ್‌ನ ಪ್ರಮುಖ ವ್ಯವಹಾರಗಳು ಮತ್ತು ಕ್ಲೈಂಟ್‌ಗಳಿಗೆ ನೆರವು ನೀಡಲಿದೆ. ಸದ್ಯ ಕ್ಲೈಂಟ್ ಅಗತ್ಯಗಳ ಸುತ್ತಲೂ ಸರಳವಾದ ಮತ್ತು ಹೆಚ್ಚು ಕೇಂದ್ರೀಕೃತ ಬ್ಯಾಂಕ್ ರಚಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದೆ. ಇನ್ನು ಅಮೆರಿಕಾದಲ್ಲಿ ಎಸ್‌ವಿಬಿ ಹಾಗೂ ಸಿಗ್ನೇಚರ್ ಬ್ಯಾಂಕ್ ಕುಸಿತದ ಪರಿಣಾಮ ಜಾಗತಿಕ ರೂಪದಲ್ಲಿ ಕಂಡಿದೆ. ಈಗಾಗಲೇ ಅಮೆರಿಕಾದ ಷೇರು ಮಾರುಕಟ್ಟೆ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಇದರ ಪರಿಣಾಮ ಏಶ್ಯಾ ಸೇರಿದಂತೆ ಜಾಗತಿಕವಾಗಿ ನಕರಾತ್ಮಕ ಪರಿಣಾಮ ಬೀರಿದೆ.

ನಮ್ಮ ಗ್ರಾಹಕರು ಮತ್ತು ಇತರ ಮಧ್ಯಸ್ಥಗಾರರಿಗೆ ಮೌಲ್ಯವನ್ನು ತಲುಪಿಸಲು ನಾವು ನಮ್ಮ ಕಾರ್ಯತಂತ್ರದ ರೂಪಾಂತರವನ್ನು ಮುಂದುವರಿಸುವುದರಿಂದ ಈ ಕ್ರಮಗಳು (ಸಾಲ) ಕ್ರೆಡಿಟ್ ಸ್ಯೂಸ್ಸೆಯನ್ನು ಬಲಪಡಿಸಲು ನಿರ್ಣಾಯಕ ಕ್ರಮವನ್ನು ಪ್ರದರ್ಶಿಸುತ್ತವೆ. ಕಾರ್ಯತಂತ್ರದ ರೂಪಾಂತರವನ್ನು ಕಾರ್ಯಗತಗೊಳಿಸುವಾಗ ಸ್ವಿಸ್ ನ್ಯಾಷನಲ್ ಬ್ಯಾಂಕ್ ಮತ್ತು ಎಫ್‌ಐಎನ್‌ಎಮ್‌ಎಗೆ ಧನ್ಯವಾದ ತಿಳಿಸುತ್ತೇವೆ. ನನ್ನ ತಂಡ ಮತ್ತು ನಾನು ಕ್ಲೈಂಟ್ ಅಗತ್ಯಗಳ ಸುತ್ತಲೂ ನಿರ್ಮಿಸಲಾದ ಸರಳ ಮತ್ತು ಹೆಚ್ಚು ಕೇಂದ್ರೀಕೃತ ಬ್ಯಾಂಕ್ ಅನ್ನು ತಲುಪಿಸಲು ವೇಗವಾಗಿ ಮುಂದುವರಿಯಲು ನಿರ್ಧರಿಸಿದ್ದೇವೆ.
-ಅಲ್ರಿಚ್ ಕಾರ್ನರ್, ಕ್ರೆಡಿಟ್ ಸ್ಯೂಸ್ಸೆ ಸಿಇಒ