ಎಸ್‌ಎನ್‌ಗೆ ಸಚಿವ ಸ್ಥಾನ ಅಭಿಮಾನಿಗಳಿಂದ ಉರುಳು ಸೇವೆ

ಕೋಲಾರ, ಮೇ ೧೯: ಬಂಗಾರಪೇಟೆ ಕ್ಷೇತ್ರದಲ್ಲಿ ೩ನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಶಾಸಕ ಎಸ್.ಎನ್. ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಎಸ್.ಎನ್.ಅಭಿಮಾನಿಗಳು ನಗರದ ಕೋಲಾರಮ್ಮ ದೇವಾಲಯದ ಆವರಣದಲ್ಲಿ ೧೦೧ ಈಡುಗಾಯಿ ಹೊಡೆದು, ಎಸ್.ಎನ್. ಪ್ಲೆಕ್ಸಿಗೆ ಹಾಲಿನ ಅಭಿಷೇಕ ಮಾಡಿ, ಉರುಳು ಸೇವೆ ಸಲ್ಲಿಸಿದರು.
ಚಿಕ್ಕಅಂಕಂಡಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸಿ.ಎಂ.ಹರೀಶ್, ಬಂಗಾರಪೇಟೆಯ ಇತಿಹಾಸದಲ್ಲೇ ಯಾರೂ ಸಹ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿರಲಿಲ್ಲ. ಮೊದಲ ಬಾರಿಗೆ ಎಸ್.ಎನ್.ನಾರಾಯಣಸ್ವಾಮಿ ಇತಿಹಾಸ ಸೃಷ್ಠಿಸಿದ್ದಾರೆ. ಜಿಲ್ಲೆಯಲ್ಲಿ ಗೆಲುವು ಸಾಧಿಸಿರುವ ೪ ಮಂದಿ ಕಾಂಗ್ರೆಸ್ ಶಾಸಕರ ಪೈಕಿ ೩ನೇ ಬಾರಿ ಗೆಲುವು ಸಾಧಿಸುವ ಮೂಲಕ ಎಸ್.ಎನ್. ಹಿರಿಯರಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಿದರೆ ದಲಿತ ಸಮುದಾಯಕ್ಕೂ ನ್ಯಾಯ ನೀಡಿದಂತಾಗುತ್ತದೆ. ಹಾಗಾಗಿ ಹಿಂದುಳಿದಿರುವ ಜಿಲ್ಲೆಯ ನಾಯಕನಿಗೆ ಸಚಿವ ಸ್ಥಾನವನ್ನು ನೀಡಲು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರು ಅಗತ್ಯ ಕ್ರಮಕೈಗೊಳ್ಳಬೇಕಿದೆ.
ಈಗಾಗಲೇ ರಕ್ತದಲ್ಲಿ ಪತ್ರ ಬರೆದು ಕಳುಹಿಸಲಾಗಿದ್ದು, ದೇವಾಲಯದಲ್ಲಿಯೂ ಈಡುಗಾಯಿ ಹೊಡೆದು, ಹಾಲಿನ ಅಭಿಷೇಕ ಮಾಡಿ, ಉರುಳುಸೇವೆ ಸಲ್ಲಿಸಿದ್ದೇವೆ. ಈಗಾಗಲೇ ಜಿಲ್ಲೆಯಲ್ಲೇ ಬಂಗಾರಪೇಟೆಯನ್ನು ಮಾದರಿ ಕ್ಷೇತ್ರವನ್ನಾಗಿಸಿರುವ ಎಸ್.ಎನ್. ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆಯು ಸಮಗ್ರ ಅಭಿವೃದ್ಧಿಯಾಗಲಿದ್ದು, ನಮ್ಮ ಮನವಿಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಅ.ನಾ.ಹರೀಶ್ ಮಾತನಾಡಿ, ಬಂಗಾರಪೇಟೆಯ ಶಾಸಕರು ಗೆದ್ದರೆ ಅವರ ಮನೆ ಬಾಗಿಲು ಕಾಯುವುದಾಗಿ ಸಂಸದ ಎಸ್.ಮುನಿಸ್ವಾಮಿ ಹೇಳಿಕೆ ನೀಡಿದ್ದರು. ಇದೀಗ ಎಸ್.ಎನ್. ನಾರಾಯಣಸ್ವಾಮಿ ೩ನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಹಾಗಾಗಿ ವಾಚ್‌ಮನ್ ಆಗುತ್ತಾರಾ ಎನ್ನುವುದಕ್ಕೆ ಉತ್ತರ ನೀಡಲಿಬಂಗಾರಪೇಟೆ ತಾಲೂಕಿನ ಜನರು ಒಂದೊಂದು ರೂಪಾಯಿ ಹಾಕಿ ಗುಣಮಟ್ಟದ ವಸ್ತ್ರ ಹೊಲಿಸಿ, ಟೈ, ಟೋಪಿ, ಶೂ, ಕೋಲು ಎಲ್ಲವನ್ನು ಕೊಡಿಸುತ್ತೇವೆ. ಬಂದು ಕಾವಲು ಕಾಯಲಿ ಎಂದು ಸವಾಲು ಹಾಕಿದರು.
ಇನ್ನು ನಮ್ಮ ಶಾಸಕರಿಗೆ ಹೈಕಮಾಂಡ್ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಈಡುಗಾಯಿ ಹೊಡೆದು, ಹಾಲಿನ ಅಭಿಷೇಕ ಮಾಡಿ ಉರುಳುಸೇವೆ ಸಲ್ಲಿಸಿದ್ದೇವೆ. ೩೫ ವರ್ಷಗಳ ರಾಜಕೀಯ ಅನುಭವ ಇರುವ ಅವರಿಗೆ ಸಚಿವ ಸ್ಥಾನ ನೀಡಲೇಬೆಕೆಂದು ಒತ್ತಾಯಿಸಿದರು.
ಎಸ್.ಎನ್. ಅಭಿಮಾನಿಗಳಾದ ಸಂದೀಪ್‌ಗೌಡ, ಮುತ್ತು, ಅಬ್ಬಣಿ ಅರುಣ್, ವೆಂಕಟ್‌ರಾಜ್, ಜಬ್ಬಿ, ಮಂಜು ಇದ್ದರು.