ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತ ಸೌಲಭ್ಯ ಸೇವೆ

ಕೋಲಾರ,ಆ. ೧- ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯು ದಿನದ ೨೪ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದು. ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತಾ ಬಂದಿದೆ. ವೈದ್ಯರು ಉತ್ತಮ ಸೇವೆಗಳನ್ನು ನೀಡುತ್ತಿದ್ದು, ಆಸ್ಪತ್ರೆಯಲ್ಲಿ ಸುಸಜ್ಜಿತ ಸೌಲಭ್ಯ ಹಾಗೂ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ವಿಜಯ್‌ಕುಮಾರ್ ಅವರು ತಿಳಿಸಿದರು.
ನಗರದ ಜಿಲ್ಲಾ ಶಸ್ತ್ರಚಿಕಿತ್ಸಕರ ಕಛೇರಿಯಲ್ಲಿ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯ ಅಭಿವೃದ್ಧಿ ಮತ್ತು ಡಿಎನ್‌ಬಿ ಸ್ನಾತಕೋತ್ತರಗಳ ಬಗ್ಗೆ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು
ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಿಮೊತೆರಪಿಯನ್ನು ನೀಡಲಾಗುತ್ತಿದೆ. ಎಂ.ಆರ್.ಐ ನವೀಕರಣವು ಸಹ ಆಗಿದೆ. ಪ್ರತಿದಿನ ೪೫ ಎಂಆರೈ ಪರೀಕ್ಷೆಗಳು ನಡೆಯುತ್ತಿವೆ. ದಿನಕ್ಕೆ ೪೬ ಸಿಟಿ ಸ್ಕ್ಯಾನ್ ಪರೀಕ್ಷೆಗಳು ನಡೆಯುತ್ತಿವೆ. ಯಾವುದೇ ಕಾರಣಕ್ಕೂ ಹೊರಗಿನ ಔಷಧಿಗಳನ್ನು ತರಲು ಬರೆಯದಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಪ್ರತಿದಿನ ಆಸ್ಪತ್ರೆಯಲ್ಲಿ ಸ್ವಚ್ಛತೆ ಕೆಲಸ ನಡೆಯುತ್ತಿದೆ. ದಿನಕ್ಕೆ ೧೮ ಜನರಿಗೆ ಡಯಾಲಿಸಿಸ್ ಪರೀಕ್ಷೆ ನಡೆಯುತ್ತಿದೆ. ಪ್ರತಿ ವೈದ್ಯರಿಗೆ ಅವರದೇ ಆದ ಜವಾಬ್ದಾರಿಗಳನ್ನು ವಹಿಸಿದ್ದೇವೆ ಅದರಂತೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯ ವಿರುದ್ಧ ಯಾವುದೇ ದೂರು ಬಂದಲ್ಲಿ ನಮ್ಮನ್ನು ಭೇಟಿಯಾಗಿ ಆ ದೂರುಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.
ಪ್ರಸ್ತುತ ಈ ಆಸ್ಪತ್ರೆಯು ೫೦೦ ಹಾಸಿಗೆಗಳ ಜಿಲ್ಲಾ ಆಸ್ಪತ್ರೆಯಾಗಿದ್ದು, ಈ ಜಿಲ್ಲೆಯು ಆಂದ್ರಪದೇಶ ಮತ್ತು ತಮಿಳುನಾಡು ಗಡಿಭಾಗದಲ್ಲಿದ್ದು, ಪಕ್ಕದ ರಾಜ್ಯದಿಂದಲೂ ರೋಗಿಗಳು ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಬರುತ್ತಿದ್ದು ಈ ಜಿಲ್ಲಾ ಆಸ್ಪತ್ರೆಯು ಉನ್ನತ ಮಟ್ಟದ ಆಸ್ಪತ್ರೆಯಾಗಿದ್ದು, ರೆಫರಲ್ ಆಸ್ಪತ್ರೆಯಾಗಿರುತ್ತದೆ. ಮಾಸಿಕ ೪೫೦ ರಿಂದ ೫೦೦ ಹೆರಿಗೆಗಳು, ೪೦೦ ರಿಂದ ೫೦೦ ಸಾಮಾನ್ಯ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ಕುಟುಂಬ ಕಲ್ಯಾಣ ಯೋಜನೆಯಡಿ ಸಂತಾನಹರಣ ಶಸ್ತ್ರಚಿಕಿತ್ಸೆ (ಟಿ.ಓ ಮತ್ತು ಎಲ್.ಟಿ.ಓ) ಕ್ಯಾಂಪ್‌ಗಳು ಸಹ ನಡೆಯುತ್ತಿದ್ದು, ಪ್ರತೀ ತಿಂಗಳು ೧೫೦ ರಿಂದ ೨೦೦ ಫಲಾನುಭವಿಗಳು ಶಸ್ತ್ರಚಿಕಿತ್ಸೆಯ ಉಪಯೋಗ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಒಟ್ಟು ೪೫ ವೈದ್ಯಾಧಿಕಾರಿಗಳಿದ್ದು, ಎಲ್ಲಾ ವಿಭಾಗದಲ್ಲೂ ತಜ್ಞ ವೈದ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಆಸ್ಪತ್ರೆಗೆ ಬರುವ ಸಾರ್ವಜನಿಕ ರೋಗಿಗಳಿಗೆ ಸಕಾಲಕ್ಕೆ ತುರ್ತುಚಿಕಿತ್ಸೆಯ ಸೇವೆಗಳು ಹಾಗೂ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿ ನುರಿತ ಪಿ.ಜಿ ಬೋಧಕರು ಸೇವೆ ಸಲ್ಲಿಸುತ್ತಿದ್ದು, ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಪಿಜಿ ಬೋಧಕರ ಸಹಾಯದಿಂದ ನಿರ್ವಹಿಸಲಾಗುತ್ತಿದ್ದು ಮತ್ತು ರೆಫರಲ್ ಕಡಿತಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ ಅಗತ್ಯಗನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಘಟಕಗಳು ಮತ್ತು ಪಿ.ಎಸ್.ಎ ಪ್ಲಾಂಟ್‌ಗಳು ಚಾಲ್ತಿಯಲ್ಲಿದ್ದು, ಯಾವುದೇ ಕೊರತೆ ಇರುವುದಿಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗರ್ಭಿಣಿ ಸ್ತ್ರೀರೋಗ ಕಾರ್ಯಕ್ರಮದ ಮುಖ್ಯಸ್ಥರಾದ ಪ್ರೋ. ನಾರಾಯಣಸ್ವಾಮಿ, ಆರ್.ಎಂ.ಓ ಡಾ|| ಬಾಲಸುಂದರ್, ಮಕ್ಕಳ ತಜ್ಞರಾದ ಶ್ರೀನಾಥ್, ಶುಶ್ರೂಷ ಅಧೀಕ್ಷಕರಾದ ಎಸ್.ವಿಜಯಮ್ಮ, ಸುಮತಿ ಉಪಸ್ಥಿತರಿದ್ದರು.