ಎಸಿ ಸ್ಫೋಟ ನವ ವಿವಾಹಿತ ಸಾವು

ಚೆನ್ನೈ (ತಮಿಳುನಾಡು),ಆ.2- ಮನೆಯಲ್ಲಿ ರಾತ್ರಿ ಮಲಗಿದ್ದಾಗ ಎಸಿ ಸ್ಫೋಟಗೊಂಡು ನವ ವಿವಾಹಿತನೋರ್ವ ಸಾವನ್ನಪ್ಪಿರುವ ದಾರುಣ ಘಟನೆ ಪೆರಂಬೂರ್​ನಲ್ಲಿ ನಡೆದಿದೆ.
ಪೆರಂಬೂರ್​ನ ಮನವಲನ್​ ಬಡಾವಣೆಯ ಶ್ಯಾಮ್​ (28) ಮೃತಪಟ್ಟವರು.
ನವ ವಿವಾಹಿತ ಶ್ಯಾಮ್​ ತಮ್ಮ ಮನೆಯ ಕೆಳ ಮಹಡಿಯಲ್ಲಿ ಮಲಗಿದ್ದರು. ತಂದೆ ಪ್ರಭಾಕರನ್​ ಮೇಲ್ಮಹಡಿಯಲ್ಲಿ ನಿದ್ರಿಸುತ್ತಿದ್ದರು. ಆದರೆ, ರಾತ್ರಿ ಕೆಳ ಮಹಡಿಯಿಂದ ಭಾರಿ ಸ್ಪೋಟದ ಸದ್ದು ಕೇಳಿ ಬಂದಿದ್ದು ತಂದೆ ಕೆಳಗಡೆ ಓಡಿ ಬಂದಿದ್ದಾರೆ. ಆಗ ದಟ್ಟ ಹೊಗೆ ಆವರಿಸಿದ್ದನ್ನು ಕಂಡ ಪ್ರಭಾಕರನ್​ ಬಾಗಿಲು ಮುರಿದು ಒಳಹೋಗಿ ನೋಡಿದರೆ, ಎಸಿ ಸ್ಫೋಟದಿಂದ ಮಗ ಶ್ಯಾಮ್​ ಸುಟ್ಟು ಕರಕಲಾಗಿದ್ದರು.ನಂತರ ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಶ್ಯಾಮ್​ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಶ್ಯಾಮ್​ಗೆ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ದುರ್ಘಟನೆ ನಡೆದ ದಿನ ಪತ್ನಿ ತವರು ಮನೆಗೆ ಹೋಗಿದ್ದರು ಎಂದು ತಿಳಿದು ಬಂದಿದೆ.