ಎಸಿ ಕಚೇರಿ ಆವರಣದಲ್ಲಿ ಕರಡಿ ಪ್ರತ್ಯಕ್ಷ!

ಮಧುಗಿರಿ, ಡಿ. ೨೯- ಪಟ್ಟಣದ ಹೃದಯ ಭಾಗದಲ್ಲಿರುವ ಜನನಿಬಿಡ ಪ್ರದೇಶವಾದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದೊಳಗೆ ಕರಡಿ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿಸಿದ್ದ ಘಟನೆ ನಡೆದಿದೆ.
ರಾತ್ರಿ ೯ ಗಂಟೆ ಸಮಯದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಆವರಣದೊಳಗೆ ಕರಡಿ ಕಾಣಿಸಿಕೊಂಡಿದ್ದು, ಭಯಭೀತರಾದ ಜನತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ತಡ ರಾತ್ರಿಯಲ್ಲೂ ಕರಡಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.
ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಎಸಿ ಕಚೇರಿ ಆವರಣದಲ್ಲಿ ಜನ ಸಂಚಾರ ಸಮಯದಲ್ಲೇ ಕರಡಿ ಕಾಣಿಸಿಕೊಂಡಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದ್ದು, ಈ ಭಾಗದಲ್ಲಿ ಬೆಟ್ಟ ಗುಡ್ಡಗಳು ಸಮೀಪವಿರುವುದರಿಂದ ಕೋಟೆ ಆವರಣದ ಮೂಲಕ ಬಂದ ಕರಡಿ ವಾಪಾಸ್ ಹೋಗಲು ಸಾಧ್ಯವಾಗದೆ ಗಾಬರಿಗೊಂಡು ಎಸಿ ಕಚೇರಿಯೊಳಗೆ ನುಗ್ಗಿದೆ ಎನ್ನಲಾಗಿದೆ.
ಇಡೀ ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕರಡಿಗಾಗಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗದೆ ಕರಡಿ ನಾಪತ್ತೆಯಾಗಿರುವುದು ಮತ್ತಷ್ಟು ಆತಂಕ ಮೂಡಿಸಿದೆ.