ಎಸಿಬಿ ಬಲೆಗೆ ಭೂಸ್ವಾಧೀನ ಅಧಿಕಾರಿ

ಚಿತ್ರದುರ್ಗ, ಸೆ.೧೫- ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಂಡ ಜಮೀನಿನ ಪರಿಹಾರ ಧನ ನೀಡಲು ೬ ಲಕ್ಷ ರೂಗಳ ಲಂಚ ಪಡೆಯುತ್ತಿದ್ದ ವಿಶೇಷ ಭೂಸ್ವಾಧೀನ ಅಧಿಕಾರಿ ಸೇರಿ ಮೂವರು ರೆಡ್‌ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.
ಲಂಚ ಪಡೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನ ಅಧಿಕಾರಿ ವೀರೇಶ್ ಕುಮಾರ್, ಮ್ಯಾನೇಜರ್ ಮೋಹನ್ ಕುಮಾರ್ ಹಾಗೂ ಕಾರು ಚಾಲಕ ಮನ್ಸೂರ್‌ನನ್ನು ಬಲೆಗೆ ಕೆಡವಿದ ಎಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನಿನ ಪರಿಹಾರದ ಹಣ ನೀಡಲು ಹಿರಿಯೂರಿನ ನೇತ್ರಾ ಕರಿಯಪ್ಪ ಅವರಿಗೆ ಅಧಿಕಾರಿಗಳು ಸುಮಾರು ೯ ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಅದಕ್ಕೆ ಒಪ್ಪದಿದ್ದಾಗ ೬ ಲಕ್ಷ ಹಣಕ್ಕೆ ವ್ಯವಹಾರ ಕುದುರಿಸಿ ಚಳ್ಳಕೆರೆ ರಸ್ತೆಯ ಎಸ್‌ಎಲ್‌ಒ ಕಚೇರಿಯಲ್ಲಿ ಹಣ ನೀಡಲು ಮುಂದಾದಾಗ ಎಸಿಬಿ ಅಧಿಕಾರಿಗಳ ಕೈಗೆ ಭೂಸ್ವಾಧೀನ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.