ಎಸಿಬಿಯಿಂದ ಭ್ರಷ್ಟಾಚಾರ ಜಾಗೃತಿ

ಬಳ್ಳಾರಿ,ಡಿ.30:ಸಾರ್ವಜನಿಕರ ಸೇವೆ ಮಾಡಲು ಅವಕಾಶ ದೊರೆತಿರುವುದೇ ಒಂದು ಅದೃಷ್ಟ;ಅದನ್ನು ಸಮಾಜದ ಒಳಿತಿಗೆ, ಸಾಮಾನ್ಯ ಜನರ ಶ್ರೇಯಸ್ಸಿಗಾಗಿ ಬಳಕೆ ಮಾಡಿ ಎಂದು ಭ್ರಷ್ಟಾಚಾರ ನಿಗ್ರಹದಳದ ಬಳ್ಳಾರಿ ವಲಯದ ಎಸ್ಪಿ ಗುರುನಾಥ್ ಮತ್ತೂರು ಹೇಳಿದರು.
ಅವರು ನಿನ್ನೆ ಸಂಜೆ ನ ಎಂಜನಿಯರ್ಸ್ ಅಸೋಸಿಯೇಶನ್ ಫಂಕ್ಷನ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಭ್ರಷ್ಟಾಜಾರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಮಗೆ ದೊರೆತ ಹುದ್ದೆ ಮತ್ತು ಹಣ ಯಾವುದೂ ಶಾಶ್ವತವಲ್ಲ;ಒಳ್ಳೆಯ ಕೆಲಸ ಮಾಡಿ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿ ನಿಮಗೂ ಒಂದು ನೆಮ್ಮದಿ ದೊರೆಯುತ್ತದೆ. ಮನುಷ್ಯನಿಗೆ ಆಲೋಚಿಸುವ ಶಕ್ತಿಯಿದೆ;ವಿವೇಚನೆಯಿಂದ ಕೆಲಸ ಮಾಡಿ ಎಂದರು.
ಡಿವೈಎಸ್ಪಿ ಚಂದ್ರಕಾಂತ್ ಪೂಜಾರಿ ಅವರು ಮಾತನಾಡಿ, ಯಾವುದೇ ಲಾಭ ಪಡೆಯದೆ ಸಾರ್ವಜನಿಕರ ಕೆಲಸವನ್ನು ಮಾಡಿಕೊಡಿ, ವೈಯಕ್ತಿಕವಾಗಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವಲ್ಲಿ ಪಣ ತೊಡಿ ಈ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಭಿಯಂತರ ಆರ್.ಎಸ್.ಮೋಹನ್ ಕುಮಾರ್, ಎಸಿಬಿ ಇನ್ಸಪೆಕ್ಟರ್ ಪ್ರಭುಲಿಂಗಯ್ಯ ಹಿರೇಮಠ ಅವರು ಮಾತನಾಡಿದರು. ಜೆಸ್ಕಾಂ ಸಿಬ್ಬಂದಿ ಹಾಗೂ ಇತರರು ಇದ್ದರು.