ಎವೆರಿವನ್ ಚಿತ್ರ ಹೊಸ ದಾಖಲೆ

ತಿರುವನಂತಪುರಂ,ಮೇ.೧೫-ಸಾಕಷ್ಟು ವಿರೋಧದ ನಡುವೆಯೂ ’ದಿ ಕೇರಳ ಸ್ಟೋರಿ’ ರಾಷ್ಟ್ರವ್ಯಾಪಿ ಗಮನ ಸೆಳೆಯುತ್ತಿರುವ ಸಮಯದಲ್ಲೇ ಮಲಯಾಳಂನಲ್ಲಿ ಬಿಡುಗಡೆಯಾದ ಮತ್ತೊಂದು ಚಿತ್ರ “೨೦೧೮ ಎವೆರಿವನ್ ಈಸ್ ಎ ಹೀರೋ’ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಹೊಸ ದಾಖಲೆ ಬರೆದಿದೆ.
ನಟ ಟೋವಿನೋ ಥಾಮಸ್ ಅಭಿನಯದ ಮಲಯಾಳಂ ಚಿತ್ರ ’೨೦೧೮ ಎವೆರಿವನ್ ಈಸ್ ಎ ಹೀರೋ’ ವಿಶ್ವಾದ್ಯಂತ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಎಲ್ಲೆಡೆಯಿಂದ ಬರುತ್ತಿರುವ ಅಪಾರ ಮೆಚ್ಚುಗೆ ಚಿತ್ರತಂಡ ಖುಷಿಯಲ್ಲಿಧ.
ಚಿತ್ರ ಬಿಡುಗಡೆಯಾದ ೯ ದಿನದಲ್ಲೇ ಕೇರಳವೊಂದರಲ್ಲೇ ಸುಮಾರು ೫.೧೮ ಕೋಟಿ ರೂ. ಹಣ ಸಂಗ್ರಹ ಮಾಡಿದ್ದು, ಮಾಲಿವುಡ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ವಿಶ್ವಾದ್ಯಂತ ಮೊದಲ ೯ ದಿನದಲ್ಲಿ ೮೦ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ೧೦೦ ಕೋಟಿಯತ್ತ ದಾಪುಗಾಲಿಡುತ್ತಿದೆ.
ಮಾಲಿವುಡ್ ಇತಿಹಾಸದಲ್ಲಿ ಸಿನಿಮಾವೊಂದು ಬಿಡುಗಡೆಯಾದ ದಿನದಿಂದಲೇ ಇಷ್ಟೊಂದು ಗಳಿಕೆ ಮಾಡಿರುವುದು ಇದೇ ಮೊದಲು. ಅಲ್ಲದೇ, ಹೊರ ರಾಜ್ಯ, ದೇಶಗಳಿಂದ ಸಹ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಇದು ೨೦೧೮ ರಲ್ಲಿ ನಡೆದ ನಿಜವಾದ “ದಿ ಕೇರಳ ಸ್ಟೋರಿ” ಎನ್ನುತ್ತಾರೆ.
ಜೂಡ್ ಆಂಥೋನಿ ಜೋಸೆಫ್ ನಿರ್ದೇಶನದಲ್ಲಿ ಮೇ ೫ ರಂದು ಬಿಡುಗಡೆಯಾದ ಮಾಲಿವುಡ್‌ನ ಅತಿ ದೊಡ್ಡ ಬಜೆಟ್‌ನ ಚಿತ್ರ ’೨೦೧೮ ಎಪ್ರಿವನ್ ಈಸ್ ಎ ಹೀರೋ’ದಲ್ಲಿ ಟೋವಿನೋ ಥಾಮಸ್, ಆಸಿಫ್ ಅಲಿ, ಗುಂಜಾಕೊ ಬೋಬನ್, ಲಾಲ್, ನರೇನ್, ವಿನೀತ್ ಶ್ರೀನಿವಾಸನ್, ಅಪರ್ಣಾ ಬಾಲಮುರಳಿ, ತನ್ನಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಟೋವಿನೋ ಅಭಿನಯದ ೨೦೨೧ ರಲ್ಲಿ ಬಿಡುಗಡೆಯಾದ ’ಮಿನ್ನಲ್ ಮುರಳಿ’ ಸಿನಿಮಾದ ನಂತರ ರಾಷ್ಟ್ರಮಟ್ಟದ ಗಮನ ಮತ್ತು ಪ್ರೇಕ್ಷಕರ ಮನಗೆದ್ದ ಚಿತ್ರ ಇದಾಗಿದೆ.
ಕೇರಳದ ಕೆಲವು ಭಾಗಗಳನ್ನು ಧ್ವಂಸಗೊಳಿಸಿದ ೨೦೧೮ ರ ಪ್ರವಾಹದ ಕಥೆ ಆಧಾರವಾಗಿಟ್ಟು ಕೊಂಡು ಸಿನಿಮಾ ಚಿತ್ರೀಕರಿಸಲಾಗಿದ್ದು, ಮಾನವ ಸಂಬಂಧಗಳ ಮೇಲೆ ಪ್ರಕೃತಿ ವಿಕೋಪ ಹೇಗೆಲ್ಲ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುವುದನ್ನು ತೋರಿಸಲಾಗಿದೆ.